Advertisement

ಕಾಯಕ ನಿಷ್ಠೆಗೆ ಸಿದ್ಧರಾಮೇಶ್ವರ ಹೆಸರುವಾಸಿ

09:49 AM Feb 07, 2019 | |

ಕಲಬುರಗಿ: ಹನ್ನೆರಡನೇ ಶತಮಾನದಲ್ಲಿಯೇ ಮಾನವ ಜೀವನದ ಒಳಿತಿಗಾಗಿ ಕೆರೆ-ಕಟ್ಟೆಗಳ‌ ನಿರ್ಮಾಣದ ಪರಿಕಲ್ಪನೆ ಹೊಂದಿದ್ದ ಶರಣ ಶಿವಯೋಗಿ ಸಿದ್ಧರಾಮೇಶ್ವರರು ಕಾಯಕ ನಿಷ್ಠೆಗೆ ಹೆಸರಾದವರು ಎಂದು ವಿಜಯಪುರದ ಬಿ.ಎಲ್‌.ಡಿ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ವಿ. ಒಡೆಯರ್‌ ಹೇಳಿದರು.

Advertisement

ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರರ 847ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಆಕಾಶದಲ್ಲಿ ನಕ್ಷತ್ರ ಹೊಳೆದಂತೆ ಶಿವಯೋಗಿ ಸಿದ್ಧರಾಮೇಶ್ವರ ಜೀವನ ಚರಿತ್ರೆ ಇತಿಹಾಸವಿದೆ. ಜೀವನುದುದ್ದಕ್ಕು ಯಾವುದೇ ಕಳಂಕವಿಲ್ಲದೆ ದುಡಿದ ಶ್ರೇಷ್ಠ ಕಾಯಕಯೋಗಿ ಅವರಾಗಿದ್ದಾರೆ ಎಂದರು.

12ನೇ ಶತಮಾನದಲ್ಲಿ ಅತಿ ಹೆಚ್ಚು ಅಂದರೆ 68 ಸಾವಿರ ವಚನಗಳನ್ನು ಕನ್ನಡದಲ್ಲಿ ಬರೆದ ಪ್ರಥಮ ವಚನಕಾರ ಎಂಬ ಕೀರ್ತಿಗೆ ಶಿವಯೋಗಿ ಸಿದ್ದರಾಮೇಶ್ವರರು ಪಾತ್ರರಾಗಿದ್ದು, ದುರಾದೃಷ್ಟ ಎಂದರೆ 137 ವಚನಗಳು ಮಾತ್ರ ನಮಗೆ ಓದಲು ದೊರಕಿವೆ ಎಂದರು.

ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಭೋವಿ ಸಮಾಜದಲ್ಲಿ ಅನೇಕ ಬಡ ಮಕ್ಕಳಿದ್ದು, ಅವರೆಲ್ಲರಿಗೂ ಸರ್ಕಾರದ ಸೌಲಭ್ಯ ದೊರೆತಿದ್ದೇ ಆದಲ್ಲಿ ಇವರು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.

Advertisement

ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತ ಮಲಾಜಿ ಅವರು ಶರಣ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು.

ಪಾಲಿಕೆ ಮಹಾಪೌರರಾದ ಮಲ್ಲಮ್ಮ ಸಿದ್ರಾಮಪ್ಪ ವಳಕೇರಿ, ಪ್ರಭಾರಿ ಅಪರ ಜಿಲ್ಲಾಧಿಕಾರಿ ಡಾ| ಶರಣಪ್ಪ ಸತ್ಯಂಪೇಟ್, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್‌, ಭೋವಿ ವಡ್ಡರ ಸಮಾಜದ ಗೌರವಾಧ್ಯಕ್ಷ ರಾಮು ನಂದೂರ, ಭೋವಿ ವಡ್ಡರ ನೌಕರರ ಸಂಘದ ಜಿಲ್ಲಾಧ್ಯಕ್ಷ ತಿಮ್ಮಯ್ಯ ಶಹಾಬಾದಕರ್‌, ಭೋವಿ ವಡ್ಡರ ಸಮಾಜದ ನಗರಾಧ್ಯಕ್ಷ ಭೀಮಾಶಂಕರ ಭಂಕೂರ, ಮುಖಂಡರಾದ ಸಿದ್ರಾಮ ದಂಡಗುಳಕರ್‌, ಈರಣ್ಣ ಹಲಕಟ್ಟಿ, ರಾಮಯ್ಯ ಪೂಜಾರಿ ಹಾಗೂ ಇನ್ನಿತರ ಮುಖಂಡರು, ಸಮುದಾಯ ಬಾಂಧವರು ಇದ್ದರು.

ಕಲಬುರಗಿ ಜಿಲ್ಲಾ ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪಣ ಒಡೆಯರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್‌ ಮರಬನಳ್ಳಿ ಸ್ವಾಗತಿಸಿದರು, ಶಿವಾನಂದ ಅಣಜಗಿ ನಿರೂಪಿಸಿದರು.

ಶರಣ ಸಿದ್ಧರಾಮೇಶ್ವರರು ಹೇಳಿದ ಹಾಗೆ ಕಲ್ಲು ಒಡೆಯುವ ಕೆಲಸ ತುಂಬಾ ಕಷ್ಟದ ಕೆಲಸ. ಅದು ಕೇವಲ ಭೋವಿ ವಡ್ಡರ್‌ ಸಮುದಾಯದ ಜನರಿಂದ ಮಾತ್ರ ಸಾಧ್ಯ. ಆದರೆ ಇತ್ತೀಚೆಗೆ ಗಣಿಗಾರಿಕೆ ಸ್ಥಗಿತದಿಂದ ಈ ಸಮುದಾಯ ತನ್ನ ಮೂಲ ವೃತ್ತಿಯನ್ನೆ ಕಳೆದುಕೊಂಡು ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಯಲು ಸರ್ಕಾರವು ಜಿಪಂ ವ್ಯಾಪ್ತಿಯಲ್ಲಿ ವಿಶೇಷವಾಗಿ 5 ಎಕರೆ ಜಮೀನು ನೀಡಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಿಕೊಡಬೇಕು. ಈ ಸಮುದಾಯದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಬೇಕು ಹಾಗೂ ಜಿಲ್ಲಾ ಕೇಂದ್ರದಲ್ಲಿ ಭೋವಿ ಸಮುದಾಯ ಭವನ ನಿರ್ಮಾಣವಾಗಬೇಕು.
• ಕೆ.ವಿ. ಒಡೆಯರ್‌, ಬಿ.ಎಲ್‌.ಡಿ ಸಂಸ್ಥೆ ಪಪೂ ಕಾಲೇಜಿನ ಉಪನ್ಯಾಸಕ, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next