ಬೆಂಗಳೂರು : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಕೋವಿಡ್ ಸುರಕ್ಷತೆ ಹೆಸರಿನಲ್ಲಿ ಕಡಿವಾಣ ಹಾಕುವುದು ಅಸಾಧ್ಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಎಲ್ಲ ಸುರಕ್ಷಿತ ಕ್ರಮದೊಂದಿಗೆ ನಾವು ಪಾದಯಾತ್ರೆ ನಡೆಸುತ್ತಿದ್ದೇವೆ. ಇದಕ್ಕೆ ಕೋವಿಡ್ ಕಾರಣ ಕೊಟ್ಟು ನಿಲ್ಲಿಸುವ ಪ್ರಯತ್ನ ಬೇಡ. ಕೊರೋನಾ ತೀವ್ರ ಸ್ವರೂಪದಲ್ಲಿದ್ದಾಗಲೇ ಬಿಜೆಪಿಯವರಉ ಜನಾಶೀರ್ವಾದ ಯಾತ್ರೆ ಮಾಡಿಲ್ಲವೇ ? ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಪ್ರಚಾರ ಸಭೆ ನಡೆಸುತ್ತಿಲ್ಲವೇ ? ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಪಾಸ್ : ರಾಜ್ಯದಲ್ಲಿ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಕ್ಕೆ ಬಂದ ಮೊದಲ ಅಧಿವೇಶನದಲ್ಲೇ ನಾವು ಮತಾಂತರ ನಿಷೇಧ ಕಾಯಿದೆಯನ್ನು ವಾಪಾಸ್ ಪಡೆಯುತ್ತೇವೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ಬಲವಂತ, ಆಸೆ, ಆಮಿಷದ ಮೂಲಕ ಮತಾಂತರ ನಡೆಸುವುದಕ್ಕೆ ನಮ್ಮ ಪಕ್ಷದ ವಿರೋಧವಿದೆ. ಆದರೆ ಒಬ್ಬ ಪುರುಷ ಅಥವಾ ಮಹಿಳೆ ಪ್ರೀತಿಸಿ ಮದುವೆಯಾದ ಬಳಿಕ ಅವರ ಆಯ್ಕೆಯ ಧರ್ಮವನ್ನು ಅನುಸರಿಸುವುದು ಮತಾಂತರ ಎಂದು ಕಾಯಿದೆ ರೂಪಿಸಿರುವುದು ಸಂವಿಧಾನ ಬಾಹಿರ. ಇದನ್ನು ನಾವು ವಿರೋಧಿಸುತ್ತೇವೆ ಎಂದರು.
ಮತಾಂತರ ಕಾಯಿದೆಗೆ ನಾನೇ ಸಹಿ ಹಾಕಿದ್ದೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. 2015ರಲ್ಲಿ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನ್ಯಾ.ಮಳಿಮಠ್ ಅವರು ಒಂದು ಕರಡು ಪ್ರತಿ ರೂಪಿಸಿ ಸರಕಾರಕ್ಕೆ ಸಲ್ಲಿಸಿದ್ದರು. ಅದನ್ನು ಸಂಪುಟದ ಮುಂದೆ ಇಡುವಂತೆ ನಾನು ಸಹಿ ಮಾಡಿದ್ದೆ. ಆ ಬಳಿಕ ಇದರ ಬಗ್ಗೆ ಚರ್ಚೆ ನಡೆಸುವ ಅಗತ್ಯವಿಲ್ಲ ಎಂದು ಷರಾ ಬರೆಯುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಅವರಿಗೆ ಸೂಚಿಸಿದ್ದೆ. ಬಿಜೆಪಿಯವರು ಈ ವಿಚಾರದಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.