ಬೆಂಗಳೂರು : ಕೋವಿಡ್ ಸೋಂಕಿನಿಂದ ಮೃತಪಟ್ಟಿರುವ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವ ಬಗ್ಗೆ ಆರು ವಾರಗಳಲ್ಲಿ ಮಾರ್ಗಸೂಚಿ ರೂಪಿಸುವಂತೆ ಸುಪ್ರೀಂಕೋರ್ಟ್ ಬುಧವಾರ(ಜೂನ್ 30) ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಬೆನ್ನಿಗೆ ರಾಜ್ಯ ಕಾಂಗ್ರೆಸ್ ವಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಟ್ವೀಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : ನಾಳೆಯಿಂದ ಹೀರೋ ಮೊಟೊಕಾರ್ಪ್ ವಾಹನಗಳು ದುಬಾರಿ..! ಇಲ್ಲಿದೆ ಮಾಹಿತಿ
ತಮ್ಮ ಅಧಿಕೃತ ಟ್ವೀಟರ್ ಖಾತೆಯ ಮುಖೇನ ಸರಣಿ ಟ್ವೀಟ್ ಮಾಡಿರುವ ಅವರು, ‘ನಾವು ಈ ಹಿಂದೆಯೇ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ನೀಡಿ ಎಂದು ಒತ್ತಾಯಿಸಿದ್ದೇವೆ. ಆದರೇ, ನಮ್ಮ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿದ್ದವು. ಈಗ ಮಾನ್ಯ ಸುಪ್ರೀಂ ಕೋರ್ಟ್ ಆ ವಿಷಯವನ್ನು ಎತ್ತಿ ಹಿಡಿದಿದೆ. ಮಾರ್ಗಸೂಚಿಯನ್ನು ಆರು ವಾರಗಳಲ್ಲಿ ಬಿಡುಗಡೆ ಮಾಡಿ ಎಂದು ಸೂಚಿಸಿದೆ.ಈಗಲಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾನವೀಯತೆಯಿಂದ ನಡೆದುಕೊಳ್ಳಲಿ’ ಎಂದು ಅವರು ಬರೆದುಕೊಂಡಿದ್ದಾರೆ.
‘ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೋವಿಡ್ ನಿಂದ ಮೃತಪಟ್ಟ ಕುಟುಂಬದ ಒಬ್ಬನಿಗೆ ಮಾತ್ರ ಸೀಮಿತಗೊಳ್ಳುವಂತೆ ಪರಿಹಾರ ನಿಧಿಯಾಗಿ ಒಂದು ಲಕ್ಷವನ್ನು ಘೋಷಣೆ ಮಾಡಿದೆ. ಇದು ರಾಷ್ಟ್ರೀಯ ವಿಪತ್ತು ಪರಿಹಾರ ಮಾನದಂಡಗಳ ನಿಬಂಧನೆಗಳಿಗೆ ವಿರುದ್ಧವಾಗಿದೆ’ ಎಂದು ಅವರು ಹೇಳಿದ್ದಾರೆ.
ಇನ್ನು, ಕೋವಿಡ್ ನಿಂದ ಸಾವನ್ನಪ್ಪಿರುವ ಕುಟುಂಬ ಸದಸ್ಯರಿಗೆ ಅಂತಹ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬ ಕೇಂದ್ರದ ಮನವಿಯನ್ನು ತಿರಸ್ಕರಿಸಿದೆ. ಕೋವಿಡ್ ಸಂತ್ರಸ್ತರಿಗೆ ಪರಿಹಾರ ನೀಡುವುದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್ ಡಿಎಂಎ)ದ ಪ್ರಕಾರ ಶಾಸನಬದ್ಧವಾಗಿ ಕಡ್ಡಾಯವಾಗಿದೆ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ತನ್ನ ತೀರ್ಪಿನಲ್ಲಿ, ಆರು ವಾರಗಳಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ನೀಡಬೇಕಾದ ಪರಿಹಾರ ಮೊತ್ತ ನಿಗದಿಪಡಿಸುವಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ಇದನ್ನೂ ಓದಿ : ಹಾಲಿ ಸಿಎಂ ಜೈಲಿಗೆ ಹೋದ ಉದಾಹರಣೆಗಳಿವೆ, ರಾಜಾಹುಲಿ ಅಂತ ಹೊಗಳಬೇಡಿ : ಯತ್ನಾಳ್