ಬೆಂಗಳೂರು : ವಿಲಾಸಿ ವಸ್ತು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಹೇಳಿದ್ದ ಆಹಾರ ಸಚಿವ ಉಮೇಶ್ ಕತ್ತಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಂದು ಸಂಜೆ ( ಫೆ.15 ಸೋಮವಾರ) ಟ್ವಿಟರ್ ನಲ್ಲಿ ಉಮೇಶ್ ಕತ್ತಿ ವಿರುದ್ಧ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಉಮೇಶ್ ಕತ್ತಿಯವರೇ, ನಿಮ್ಮದೇ ಒಂದು ರಾಜ್ಯ ಕಟ್ಟಿ ನೀವೇ ಮುಖ್ಯಮಂತ್ರಿಗಳಾದಾಗ ಇಂತಹ ತುಘಲಕ್ ದರ್ಬಾರ್ ನಡೆಸಿ. ಈಗ ಕಷ್ಟಪಟ್ಟು ಗಳಿಸಿರುವ ಮಂತ್ರಿಸ್ಥಾನದಲ್ಲಿ ಕೂತು ಜನತೆಗೆ ಒಳ್ಳೆಯದನ್ನು ಮಾಡಿ. ನಿಮ್ಮ ಅಧಿಕ ಪ್ರಸಂಗತನದ ವಿರುದ್ಧ ಜನ ರೊಚ್ಚಿಗೆದ್ದು ಕತ್ತಿ ಬೀಸಿದರೆ ಇದ್ದ ಕುರ್ಚಿಯೂ ಬಿಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ಹೊಂದಿರುವವರಲ್ಲಿ ಐದು ಎಕರೆಗಿಂತ ಹೆಚ್ಚು ಜಮೀನು ಇರಬಾರದು. ಮನೆಯಲ್ಲಿ ಟಿವಿ, ಬೈಕ್, ಫ್ರಿಜ್ ಆಗಲೀ ಇರಬಾರದು. ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿಗಳು ಹಾಗೂ 1.2 ಲಕ್ಷ ರೂಗಿಂತ ಹೆಚ್ಚು ವಾರ್ಷಿಕ ಆದಾಯ ಇದ್ದವರು ಬಿಪಿಎಲ್ ಕಾರ್ಡ್ ಹೊಂದುವಂತಿಲ್ಲ. ಆ ರೀತಿ ಇರುವವರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಕೂಡಲೇ ಮರಳಿಸಬೇಕು. ಈ ರೀತಿಯ ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನ ವಾಪಸ್ ಮಾಡಲು ಮಾರ್ಚ್ 31ರವರೆಗೆ ಗಡುವು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ವೆ ಮಾಡಿ ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನ ಪತ್ತೆ ಹಚ್ಚಿ ರದ್ದು ಮಾಡುತ್ತೇವೆ ಎಂದು ಬೆಳಗಾವಿಯಲ್ಲಿ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದರು.