ಬೆಂಗಳೂರು: ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಆಗ ನನ್ನ ಮೇಲೆ ಮುಗಿಬಿದ್ದರು. ಆದರೆ ಈಗ ಅದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ. ಅವರು ರೈತ ವಿರೋಧಿ ಕಾನೂನುಗಳಿಗೆ ಬೆಂಬಲ ಕೊಟ್ಟರು, ಸಭಾಪತಿ ತೆಗೆಯಲು ಬೆಂಬಲ ನೀಡುತ್ತಿದ್ದಾರೆ.ಈಗ ಬಿಜೆಪಿಯ ಬಿ ಟೀಂ ಎಂದು ಸಾಬೀತಾಯ್ತು ಎಂದರು.
ಹೊಸ ಪಕ್ಷ ಕಟ್ಟಿ ಎಂಬ ಕುಮಾರಸ್ವಾಮಿ ಸವಾಲಿಗೆ ಉತ್ತರಿಸಿದ ಅವರು, ನಾನು ಕಾಂಗ್ರೆಸ್ ಲ್ಲಿ ಕಂಫರ್ಟಬಲ್ ಆಗಿದ್ದೀನಿ. ಪಕ್ಷದ ಹಿರಿಯ ನಾಯಕರಲ್ಲಿ ನಾನು ಒಬ್ಬ. ನಾನು ಕಾಂಗ್ರೆಸಿಗ, ಹೀಗಾಗಿ ನಾನೇಕೆ ಹೊಸ ಪಕ್ಷ ಕಟ್ಟಲಿ. ಕುಮಾರಸ್ವಾಮಿ ಹೇಳಿದ್ದನ್ನು ನಾನು ಮಾಡಬೇಕಾ? ನಾನು ಕೇಳಿದಕ್ಕೆ ಉತ್ತರ ಕೊಡಲ್ಲ, ಏನೇನೋ ಹೇಳುತ್ತಾನೆ, ಅದನ್ನು ನಾನು ಸ್ವೀಕರಿಸುವುದಿಲ್ಲ ಎಂದರು.
ಇದನ್ನೂ ಓದಿ:ಸಿಡಿದ ‘ವಿಲೀನ ಬಾಂಬ್’: ಲಿಂಬಾವಳಿ ಹೇಳಿಕೆ; ತಳ್ಳಿ ಹಾಕಿದ ಬಿಎಸ್‌ವೈ, ಎಚ್ಡಿಕೆ
ರಾಜ್ಯ ಸರ್ಕಾರವನ್ನು ಕಟುವಾಗಿ ಟೀಕಿಸಿದ ಅವರು, ಒಳ್ಳೆಯ ಅಭ್ಯಾಸ ಈ ಸರ್ಕಾರಕ್ಕೆ ಇಲ್ಲ. ಕೆಟ್ಟ ಅಭ್ಯಾಸಗಳು ಮಾತ್ರ ಈ ಸರ್ಕಾರಕ್ಕೆ ಇದೆ. ಸರ್ಕಾರಕ್ಕೆ ನಾನು ಹಲವು ಪತ್ರ ಬರೆದಿದ್ದೇನೆ. ಒಂದಕ್ಕೂ ಉತ್ತರ ಬರಲಿಲ್ಲ. ವಿಸ್ಟ್ರನ್ ಕಂಪನಿ ಕಾರ್ಮಿಕರಿಗೆ ಕಿರುಕುಳ ಕೊಡುತ್ತಿದೆ. ಸಮಸ್ಯೆ ಬಗೆಹರಿಸಿ ಎಂದು ಪತ್ರ ಬರೆದಿದ್ದೆ. ಆದರೆ ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿಲ್ಲ.ಜವಾಬ್ದಾರಿ ಇಲ್ಲದ ಸರ್ಕಾರ. ಸತ್ತ ಸರ್ಕಾರ ಇದು ಎಂದರು.
ಖಾಸಗಿ ಶಾಲೆಗಳು ಮತ್ತು ಪೋಷಕರ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಒಂದು ವರ್ಷ ಪರೀಕ್ಷೆ ಇಲ್ಲದೆ ಮಕ್ಕಳನ್ನು ಮುಂದಿನ ತರಗತಿಗೆ ಕಳುಹಿಸಿ ಕೊಡಿ ಅಂತ ಒತ್ತಾಯ ಮಾಡಿದೆ. ರವಿವಾರ ಪೋಷಕರು ಖಾಸಗಿ ಶಾಲೆಗಳ ಕಿರುಕುಳದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಸಿದ್ದರಾಮಯ್ಯ ಖಾಸಗಿ ಶಾಲೆಗಳ ಜತೆ ಸರ್ಕಾರ ಶಾಮೀಲಾಗಿದೆ ಎಂದು ಆರೋಪಿಸಿದರು.