ಬೆಂಗಳೂರು: ಹನ್ನೆರಡು ಶಾಸಕರು ದಿಢೀರ್ ರಾಜೀನಾಮೆ ನೀಡಿರುವುದರಿಂದ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ನಲ್ಲಿ ಪರ್ಯಾಯ ನಾಯಕತ್ವದ ಲೆಕ್ಕಾಚಾರ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಅತೃಪ್ತ ಶಾಸಕರ ರಾಜೀನಾಮೆ ವಾಪಸ್ ಪಡೆಯುವಂತೆ ಮಾಡಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಕುರಿತು ಕೈ ನಾಯಕರು ಆಲೊಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಶನಿವಾರ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ರೀತಿಯ ಆಲೋಚನೆ ಶುರುವಾಗಿದೆಯಂತೆ.
ಈ ಹಿಂದೆಯೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ಎಚ್.ಡಿ.ರೇವಣ್ಣ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಆಲೋಚನೆ ಮಾಡಲಾಗಿದ್ದು, ಜೆಡಿಎಸ್ ವರಿಷ್ಠ ದೇವೇಗೌಡರ ಜತೆ ಚರ್ಚಿಸಿದಾಗ ಅವರೂ ಸಹಮತ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ, ದೇವೇಗೌಡರ ಕುಟುಂಬದಲ್ಲಿ ಈ ಬಗ್ಗೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಈ ಪ್ರಸ್ತಾಪಕ್ಕೆ ಬ್ರೇಕ್ ಬಿದ್ದಿತ್ತು ಎನ್ನಲಾಗಿದೆ.
ಸಿದ್ದರಾಮಯ್ಯ ಗರಂ: ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡಿರುವ ಬೈರತಿ ಬಸವರಾಜ್ ನಡೆಯ ಬಗ್ಗೆ ಸಿದ್ದರಾಮಯ್ಯ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ. ಎಸ್.ಟಿ..ಸೋಮಶೇಖರ್, ಮುನಿರತ್ನ ಅವರೊಂದಿಗೆ ಸೇರಿಕೊಂಡು ರಾಜೀನಾಮೆಗೆ ಮುಂದಾಗಿದ್ದಕ್ಕೆ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ. ಅವರಿಗೆ ಟಿಕೆಟ್ ಕೊಡಿಸಲು ಎಷ್ಟು ಹೋರಾಟ ಮಾಡಿದ್ದೆ. ಅದನ್ನು ಅವನು ನೆನಪಿಡಲಿಲ್ಲ ಎಂದು ತಮ್ಮ ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಹತ್ತು ಸಚಿವರ ರಾಜೀನಾಮೆಗೆ ಸೂಚನೆ: ಮೈತ್ರಿ ಸರ್ಕಾರವನ್ನು ಶತಾಯ ಗತಾಯ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಹತ್ತು ಜನ ಪಕ್ಷ ನಿಷ್ಠ ಸಚಿವರಿಗೆ ರಾಜಿನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ವೇಳೆ ಅತೃಪ್ತರು ಸಚಿವ ಸ್ಥಾನ ಪಡೆಯಲು ಒಪ್ಪಿಕೊಂಡರೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಹಿರಿಯ ಸಚಿವರಾದ ಆರ್. ವಿ. ದೇಶಪಾಂಡೆ, ಕೆ.ಜೆ..ಜಾರ್ಜ್, ಶಿವಶಂಕರ ರೆಡ್ಡಿ, ಯು.ಟಿ.ಖಾದರ್, ಕೃಷ್ಣ ಬೈರೇಗೌಡ. ಪ್ರಿಯಾಂಕ್ ಖರ್ಗೆ ಸೇರಿದಂತೆ ಹತ್ತು ಸಚಿವರಿಗೆ ರಾಜ್ಯ ಕಾಂಗ್ರೆಸ್ ನಾಯಕರು ರಾಜಿನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.