Advertisement

ಇನ್ನು ಸಿದ್ದರಾಮಯ್ಯ ದರ್ಪ ನಡೆಯಲ್ಲ: ಎಚ್ಡಿಕೆ 

12:17 PM Nov 08, 2017 | Team Udayavani |

ಮೈಸೂರು: ಸಿದ್ದರಾಮಯ್ಯ ಅವರ ಹಣ, ಅಧಿಕಾರದ ದರ್ಪ ನಡೆಯುವುದಿಲ್ಲ. ಬೆಳೆಸಿದ ಪಕ್ಷಕ್ಕೆ ದ್ರೋಹ ಮಾಡಿದ, ಶಕ್ತಿ ತುಂಬಿದ ಕಾರ್ಯಕರ್ತರಿಗೆ ದ್ರೋಹ ಬಗೆದ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಜನತೆಯೇ ಉತ್ತರ ಕೊಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

Advertisement

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಲಿಂಗದೇವರ ಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕುಮಾರಪರ್ವ-2018; ಹೊಸ ಮನ್ವಂತರದ ಶುಭಾರಂಭ, ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತನ್ನನ್ನು ಸೋಲಿಸಲು ಎಲ್ಲಾ ನಾಯಕರೂ ಒಂದಾಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನಿಮ್ಮನ್ನು ಸೋಲಿಸಲು ನಾಯಕರು ಬೇಕಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರು ಸಾಕು ಎಂದು ಹೇಳಿದರು. ಹಾಸನದಲ್ಲಿ ಪರಿವರ್ತನಾ ಯಾತ್ರೆ ಮಾಡಿದ ಬಿಜೆಪಿ ನಾಯಕರು, ರೈತರಿಗೆ ದೇವೇಗೌಡರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ರೈತರೇ ಅವರಿಗೆ ಉತ್ತರ ಕೊಡುತ್ತಾರೆ. ಮುಖ್ಯಮಂತ್ರಿಯವರ ಪದ ಬಳಕೆ, ಹಾವಭಾವಗಳನ್ನು ಜನತೆ ಗಮನಿಸುತ್ತಿದ್ದಾರೆ. ಕಾಂಗ್ರೆಸ್‌-ಬಿಜೆಪಿ ನಾಯಕರ ಬಗ್ಗೆ ವೈಯಕ್ತಿಕ ಟೀಕೆಗಳಿಗೆ ತಾನು ಸಮಯ ವ್ಯರ್ಥ ಮಾಡಲ್ಲ. ಚುನಾವಣೆ ಹೊಸ್ತಿಲಲ್ಲಿರುವಾಗ ಹಿಂದಿನ ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರ ಬಯಲು ಮಾಡಲು ಹೊರಟಿರುವ ಮುಖ್ಯಮಂತ್ರಿ,

ಕಳೆದ ನಾಲ್ಕೂವರೆ ವರ್ಷ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.ಈ ಸಭೆಯನ್ನು ಕಂಡು ಜಿ.ಟಿ.ದೇವೇಗೌಡರ ಮೇಲೂ ಗದಾಪ್ರಹಾರ ಆರಂಭವಾಗಬಹುದು. ಇದಕ್ಕೆಲ್ಲಾ ಹೆದರಬೇಕಿಲ್ಲ, ನಾವಿದ್ದೇವೆ ಎಂದು ಅಭಯ ನೀಡಿದರು.

Advertisement

ರೈತರು ಕುಗ್ಗಿ ಹೋಗಿದ್ದಾರೆ: ನೋಟು ರದ್ಧತಿ, ಜಿಎಸ್‌ಟಿ ಜಾರಿಯಿಂದ ರೈತರು ಕುಗ್ಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ನಿಜಕ್ಕೂ ಕಮಿಟ್‌ಮೆಂಟ್‌ ಇದ್ದಿದ್ದರೆ ಕೇಂದ್ರ ಸರ್ಕಾರದ ಕಡೆ ಕೈತೋರಿಸದೆ, ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತಿದ್ದರು ಎಂದು ಹೇಳಿದರು.

ಸಿದ್ದು ಸಾಲ ಮಾಡಿದ್ದೇಕೆ?: ವಿರೋಧ ಪಕ್ಷಗಳಲ್ಲಿ ಇರುವವರೆಲ್ಲಾ ಭ್ರಷ್ಟರು. ತಾವೊಬ್ಬರೆ ಸತ್ಯ ಹರಿಶ್ಚಂದ್ರರು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ, ತನ್ನ ಅವಧಿಯಲ್ಲಿ ತಿಂಗಳಿಗೆ ಸರಾಸರಿ 4 ಸಾವಿರ ಕೋಟಿಯಂತೆ ಸಾಲ ಮಾಡಿದ್ದಾರೆ. ಈ ಸಾಲ ಮಾಡಿದ್ದೇಕೆ ಎಂಬುದನ್ನು ಜನತೆ ಮುಂದಿಡಲಿ ಎಂದು ಸವಾಲು ಹಾಕಿದರು.

ಮೈಸೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ದಂಧೆ ತಡೆಯಲಾಗಲಿಲ್ಲ. ಮಟ್ಕಾ ದಂಧೆಗೆ ಪೊಲೀಸರನ್ನೇ ಬಳಸಿಕೊಳ್ಳುತ್ತಿದ್ದೀರಿ. ಮುಂದಿನ ಮುಖ್ಯಮಂತ್ರಿ ತಾನೇ ಎಂದು ಹೇಳಿಕೊಳ್ಳುತ್ತಿದ್ದೀರಿ. ಯಾವ ಪುರುಷಾರ್ಥಕ್ಕೆ ನೀವು ಮತ್ತೂಮ್ಮೆ ಮುಖ್ಯಮಂತ್ರಿ ಆಗಬೇಕು ಎಂದು ಪ್ರಶ್ನಿಸಿದರು. 

100 ಕೋಟೆ ತರುತ್ತಾರೆ ಎಚ್ಚರಿಕೆ: ನಂಜನಗೂಡು, ಗುಂಡ್ಲುಪೇಟೆ ಚುನಾವಣೆಯನ್ನು ಹೇಗೆ ನಡೆಸಿದರು ಎಂಬುದು ಗೊತ್ತಿದೆ. ಪೊಲೀಸ್‌ ಜೀಪುಗಳಲ್ಲಿ ಹಣ ಬರುತ್ತದೆ. ಜಿ.ಟಿ.ದೇವೇಗೌಡರನ್ನು ಸೋಲಿಸಲು 100 ಕೋಟಿ ತರುತ್ತಾರೆ ಎಚ್ಚರಿಕೆಯಿಂದಿರಿ ಎಂದು ಮುಖಂಡರು, ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ನಾವೂ ಗೊಬ್ಬರ ಹೊತ್ತಿದ್ದೇವೆ…: ಮಾತೆತ್ತಿದರೆ ತಾನು ರೈತನ ಮಗ, ಕುರಿ ಕಾಯ್ದಿದ್ದೇನೆ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಆತ್ಮಹತ್ಯೆ ಬಗ್ಗೆ ಕನಿಕರವಿಲ್ಲ. ರೈತರ ಕಷ್ಟ ಏನು ಎಂದು ತನ್ನ ತಂದೆ-ತಾಯಿ ಕಲಿಸಿದ್ದಾರೆ. ನೀವೊಬ್ಬರೇ ಅಲ್ಲ ಕುರಿ ಕಾಯ್ದಿರುವುದು, ನಾವೂ ಗೊಬ್ಬರ ಹೊತ್ತಿದ್ದೇವೆಂದು ಮಾಜಿ ಸಿಎಂ ಕುಮಾರಸ್ವಾಮಿತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next