ದಾವಣಗೆರೆ: ಸಿದ್ದರಾಮಯ್ಯ ಸರ್ಕಾರದಲ್ಲಿ ಹಗರಣ ನಡೆದಿದೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ತನಿಖೆ ಮಾಡಲು ನಮಗೆ ಯಾವುದೇ ಅಭ್ಯಂತರ ಇಲ್ಲ. ಅಧಿಕಾರಕ್ಕೆ ಬಂದು ಇಷ್ಟು ವರ್ಷ ಏನು ಮಾಡಿದರು, ಬಾಯಲ್ಲಿ ಕಡುಬು ತಿನ್ನುತ್ತಿದ್ದರಾ.. ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಬಿಜೆಪಿಯಲ್ಲಿ ಶೇ. 40ಕಮಿಷನ್ ಭ್ರಷ್ಟಾಚಾರ ನಡೆ ಯುತ್ತಿದೆ ಎಂದು ಹೇಳುತ್ತಿರುವುದಕ್ಕೆ ಈಗ ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರ ನಡೆದಿತ್ತು ಎಂದು ಹೇಳುತ್ತಾ ಇದ್ದಾರೆ. ಬಿಜೆಪಿಯವರು ಐದು ವರ್ಷ ವಿರೋಧ ಪಕ್ಷದಲ್ಲಿ ಇರುವಾಗ ಬಾಯಿಗೆ ಬೀಗ ಹಾಕಿಕೊಂಡಿದ್ದರಾ. ಈಗ ಮುಖ್ಯ ಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರೇ ವಿರೋಧ ಪಕ್ಷದಲ್ಲಿ ಇದ್ದರು. ಈಗ ಮೂರು ವರ್ಷ ಸುಮ್ಮನಿದ್ದು .ಈಗ ತನಿಖೆ ಮಾಡುತ್ತಾರಂತೆ. ನಮ್ಮದರ ಜೊತೆಗೆ ಶೇ.40 ಕಮಿಷನ್‌ಆರೋಪದ ಬಗ್ಗೆ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
ಸರ್ಕಾರಿ ಶಾಲೆಯಲ್ಲಿ 100 ರೂಪಾಯಿ ದೇಣಿಗೆ ಪಡೆಯಲು ಅನುಮತಿ ನೀಡಿದ್ದರ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತಿತ್ತು.ಸರ್ಕಾರಿ ಶಾಲೆಯಲ್ಲಿ ಓದುವವರು ಬಡವರ ಮಕ್ಕಳು. ಅಂತಹವರಿಂದ ತಿಂಗಳಿಗೆ ನೂರು ರೂಪಾಯಿ ದೇಣಿಗೆ ವಸೂಲಿ ಮಾಡುವುದು ಎಂದರೆ ಏನರ್ಥ. ನಾವು ಕಾಂಗ್ರೆಸ್‌ನವರು ಉಚಿತವಾಗಿ ಹಾಲು, ಬಿಸಿಯೂಟ, ಶೂ ಇತರೆ ಸೌಲಭ್ಯ ಕೊಟ್ಟಿದ್ದೇವೆ. ಬಿಜೆಪಿ ಸರ್ಕಾರದವರು ಬಡ ಮಕ್ಕಳ ಬಳಿ ವಸೂಲಿ ಮಾಡುವುದಕ್ಕೆ ಮುಂದಾಗಿದ್ದರು. ನಾವು ಪೋಷಕರು ಒತ್ತಾಯ ಮಾಡಿದ ಮೇಲೆ ಸುತ್ತೋಲೆ ವಾಪಸ್ಸು ತೆಗೆದುಕೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಿಎಸ್‌ಐ ನೇಮಕಾತಿ ಹಗರಣ ತನಿಖೆ ವಿಚಾರವನ್ನು ಸಿಐಡಿಗೆ ತನಿಖೆ ಮಾಡಲು ಆಗುತ್ತಾ. ಅದರಲ್ಲೂ ಎಡಿಜಿಪಿ ವಿರುದ್ಧ ತನಿಖೆ ಮಾಡಲು ಆಗುತ್ತಾ. ಹಾಗಾಗಿ ಕೂಡಲೇ ಉನ್ನತ ಹಂತದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ೨೦ ದಿನ ಗುಂಡ್ಲು ಪೇಟೆ ಯಿಂದ ರಾಯಚೂರುವರೆಗೂ ಯಶಸ್ವಿ ಯಾಗಿ ನಡೆದಿದೆ. ಲಕ್ಷಾಂತರ ಜನರು ಸೇರಿದ್ದರು. ಪಾದಯಾತ್ರೆಗೆ ಜನರ ಸ್ಪಂದನೆ ತುಂಬಾ ಇದೆ. ಜನರಿಗೆ ಬಿಜೆಪಿ ಬೇಡವಾಗಿದೆ. ಹಾಗಾಗಿಯೇ ಪಾದಯಾತ್ರೆಗೆ ಎಲ್ಲ ಕಡೆ ಭರ್ಜರಿ ಸ್ಪಂದನೆ ಸಿಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ವಿ. ಸೋಮಣ್ಣ ಸಚಿವನಾಗಲು ನಾಲಾಯಕ್. ಹಕ್ಕುಪತ್ರ ಕೇಳುವುದಕ್ಕೆ ಬಂದಿದ್ದಂತಹ ಮಹಿಳೆ ಮೇಲೆ ಕೈ ಮಾಡಿದ್ದು ಅವರ ಸಂಸ್ಕೃತಿಯನ್ನ ತೋರಿಸುತ್ತದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.