ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸರ್ಕಾರಿ ಬಂಗಲೆ ಪಡೆಯುವ ಪ್ರಯತ್ನ ಇನ್ನೂ ಅಂತ್ಯ ಕಂಡಿಲ್ಲ. ಕಾವೇರಿ ಕೈ ತಪ್ಪಲಿರುವುದರಿಂದ ಈಗ ತಾವು ಹಿಂದೆ ಪ್ರತಿಪಕ್ಷದ ನಾಯಕರಾಗಿದ್ದಾಗ ವಾಸವಾಗಿದ್ದ ಕುಮಾರಕೃಪಾ ಪೂರ್ವದಲ್ಲಿರುವ ಮೊದಲನೇ ಮನೆಯನ್ನು ತಮಗೆ ನೀಡುವಂತೆ ಮತ್ತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈಗಾಗಲೇ ತಾವು ವಾಸಿಸುತ್ತಿದ್ದ ಕಾವೇರಿ ನಿವಾಸದಲ್ಲಿಯೇ ಮುಂದುವರಿಯಲು ಬಯಸಿದ್ದರೂ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಾವೇರಿ ನಿವಾಸ ಹಂಚಿಕೆ ಮಾಡಿ, ಕಾವೇರಿ ನಿವಾಸವನ್ನು ಖಾಲಿ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಲಾಗಿತ್ತು. ಅದರ ಬದಲು ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್- 2ನ್ನು ಸಿದ್ದರಾಮಯ್ಯ ಅವರಿಗೆ ಹಂಚಿಕೆ ಮಾಡಲಾಗಿತ್ತು.
ಆದರೆ, ಸಿದ್ದರಾಮಯ್ಯ ರೇಸ್ ವ್ಯೂ ಕಾಟೇಜ್ -2 ಗೆ ತೆರಳಲು ಹಿಂದೇಟು ಹಾಕುತ್ತಿದ್ದು, 2009ರಲ್ಲಿ ಪ್ರತಿಪಕ್ಷದ ನಾಯಕ ರಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಕುಮಾರಕೃಪಾ ಪೂರ್ವ ಭಾಗದಲ್ಲಿರುವ ಸರ್ಕಾರಿ ನಿವಾಸಗಳಲ್ಲಿ ಮೊದಲನೆಯ ಮನೆಯಲ್ಲಿ ಸಿದ್ದರಾ ಮಯ್ಯ ವಾಸವಾಗಿದ್ದರು. ಈಗ ಮತ್ತೆ ತಮಗೆ ಅದೇ ಮನೆಯನ್ನು ನೀಡುವಂತೆ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ರೇವಣ್ಣ ವಾಸ: ಕುಮಾರಕೃಪಾ ಪೂರ್ವ ಭಾಗದ ಮನೆಯಲ್ಲಿ ಮೈತ್ರಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್.ಡಿ. ರೇವಣ್ಣ ಅವರಿಗೆ ನೀಡಲಾಗಿತ್ತು. ಅವರ ಅವಧಿಯಲ್ಲಿ ಮನೆಯನ್ನು ವಾಸ್ತು ಪ್ರಕಾರ ನವೀಕರಣಗೊಳಿಸಿದ್ದರು. ಈಗಲೂ ಈ ನಿವಾಸದಲ್ಲಿ ರೇವಣ್ಣ ವಾಸವಾಗಿದ್ದು, ಅವರು ತಮ್ಮ ಸ್ವಂತ ನಿವಾಸಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಆದರೆ, ಕಾರ್ತಿಕ ಮಾಸದಲ್ಲಿ ಪೂಜೆ ಮಾಡಿ ಗೃಹ ಪ್ರವೇಶ ಮಾಡಬೇಕು ಎನ್ನುವ ಕಾರಣಕ್ಕೆ ರೇವಣ್ಣ ಇನ್ನೂ ಸರ್ಕಾರಿ ಬಂಗಲೆಯಲ್ಲಿಯೇ ಉಳಿದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಕುಮಾರಕೃಪಾ ಪೂರ್ವ ಭಾಗದ ಮನೆಯನ್ನು ಸರ್ಕಾರ ಈಗಾಗಲೇ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಹಂಚಿಕೆ ಮಾಡಿದೆ. ಎಚ್.ಡಿ. ರೇವಣ್ಣ ಮನೆ ಖಾಲಿ ಮಾಡದೇ ಇರುವುದರಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು,
ಆದಷ್ಟು ಬೇಗ ಮನೆ ಖಾಲಿ ಮಾಡಿಕೊಡುವಂತೆ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿಯೇ ಮನವಿ ಮಾಡಿದ್ದರು. ಈಗ ಸಿದ್ದರಾಮಯ್ಯ ಅವರು ಈ ಮನೆಗೆ ಬೇಡಿಕೆ ಇಟ್ಟಿರುವು ದರಿಂದ ಸರ್ಕಾರ ಅವರ ಮನವಿಗೆ ಸ್ಪಂದಿಸಿ ಹಂಚಿಕೆ ಮಾಡುತ್ತಾ ಅಥವಾ ಈಗಾಗಲೇ ಅವರಿಗೆ ಹಂಚಿಕೆ ಮಾಡಿರುವ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್ 2 ಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಲಾಗುತ್ತದೆಯಾ ಎನ್ನುವುದು ಕುತೂ ಲಹಕ್ಕೆ ಕಾರಣವಾಗಿದೆ.