Advertisement

ಸಿದ್ದರಾಮಯ್ಯ ಸುಳ್ಳು ಹೇಳುವುದಕ್ಕೂ ಮಿತಿ ಬೇಕು: ಕೆ.ಎಸ್‌.ಈಶ್ವರಪ್ಪ

09:47 PM Sep 01, 2021 | Team Udayavani |

ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

Advertisement

ಬುಧವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೈಲೇಜ್‌ ಕಡಿಮೆಯಾಗಿದೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಎರಡು ಸೀಟು ಬರುವುದಿಲ್ಲ ಅಂತ ಹೇಳಿದ್ದರು. ನಾನೇ ಮುಂದಿನ ಸಿಎಂ ಅಂತ ಹೇಳಿದ್ದರು. ಎರಡು ಕಡೆ ನಿಂತು ಒಂದು ಕಡೆ ಸೋತರು. ಬೆಳಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುತ್ತೆ ಅಂತ ಹೇಳಿದ್ದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನ ಗೆಲ್ಲುತ್ತದೆ ಅಂತ ಹೇಳಿದ್ದರು. ಇವೆಲ್ಲ ಸುಳ್ಳುಗಳನ್ನು ಯಾರು ಹೇಳಿದ್ದು? ಸಿದ್ದರಾಮಯ್ಯ ಅಂದರೆ ಸುಳ್ಳು ಎಂದು ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಸಿಎಂ ಆಗಲು ಕನಸು ಕಾಣುತ್ತಿದ್ದಾರೆ. ಇರುವವರೇ ಮೂರು ನಾಲ್ಕು ಜನರು. ಅವರೇ ಕಾಲೆಳೆದುಕೊಳ್ಳುತ್ತಿದ್ದಾರೆ. ಅದಕ್ಕೆ ಅವರಿಗೆ ಪಂಚ ಕೌರವರು ಎಂದು ಕರೆಯುತ್ತೇನೆ. ಬಿಜೆಪಿ ದೇಶದಲ್ಲಿ ಎಲ್ಲ ರಾಜ್ಯಗಳಲ್ಲಿ ಬೆಳೆಯುತ್ತಿದೆ. ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.

ಇದನ್ನೂ ಓದಿ:ಗಾಂಧಿ-ನೆಹರೂ ಕುಟುಂಬದ ವಿರುದ್ಧ ಆಕ್ಷೇಪಾರ್ಹ ವಿಡಿಯೋ : ನಟಿ ಪಾಯಲ್ ವಿರುದ್ಧ ಪ್ರಕರಣ

ಬಿಜೆಪಿಯಲ್ಲಿ ದಲ್ಲಾಳಿಗಳಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಬಿಜೆಪಿಯಲ್ಲಿ ಯಾರೂ ದಲ್ಲಾಳಿಗಳಿಲ್ಲ. ಮಾಜಿ ಮುಖ್ಯಮಂತ್ರಿ ಆಗಿ ಅವರು ಈ ರೀತಿ ಹೇಳಿದ್ದಾರೆ. ದಲ್ಲಾಳಿತನ ಮಾಡುವವರಿಗೆ ದಲ್ಲಾಳಿತನ ಗೊತ್ತಿರುತ್ತದೆ ಎಂದು ತಿರುಗೇಟು ನೀಡಿದರು. ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಯಲ್ಲಿ ಜೆಡಿಎಸ್‌ ತಟಸ್ಥವಾಗಿದ್ದಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು. ರಾಜಕೀಯದಲ್ಲಿ ಎಲ್ಲರೂ ಯಾರೂ ಶತ್ರುಗಳಲ್ಲ. ಯಾರೂ ಮಿತ್ರರೂ ಅಲ್ಲ ಎಂದು ಹೇಳಿದರು.

Advertisement

ನೋ ವ್ಯಾಕ್ಸಿನ್‌, ನೋ ರೇಷನ್‌, ನೋ ಪೆನ್ಷನ್ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶಕ್ಕೆ ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿ, ಪ್ರಧಾನಿ ಮೋದಿಯವರೇ ಉಚಿತವಾಗಿ ಎಲ್ಲರಿಗೂ ಲಸಿಕೆ ಕೊಡುವುದಾಗಿ ಹೇಳಿದ್ದಾರೆ. ಕೆಲವು ಅಧಿಕಾರಿಗಳು ಆದೇಶದಲ್ಲಿ ಈ ರೀತಿ ಮಾಡುತ್ತಿದ್ದಾರೆ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ಶಾಸಕರು ಹಾಗೂ ಸಚಿವರೊಂದಿಗೆ ರಾಜ್ಯ ಪ್ರವಾಸ ಮಾಡುವುದಾಗಿ ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next