ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಹದಿನೇಳು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಅವೈಜ್ಞಾನಿಕವಾಗಿದ್ದು, ಇದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 2022 ಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತ್ತು. ಅಲ್ಲದೆ ಅವರ ಉತ್ಪಾದನಾ ವೆಚ್ಚದ 1.5 ಪಟ್ಟು ಹೆಚ್ಚಿನ ಆದಾಯ ರೈತರಿಗೆ ದೊರೆಯುವಂತೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು.
ಆದರೆ, ಇತ್ತೀಚೆಗೆ ಕೇಂದ್ರ ಸರ್ಕಾರ 17 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಅವೈಜ್ಞಾನಿಕವಾಗಿದೆ. ಸ್ವಾಮಿನಾಥನ್ ವರದಿ ಪ್ರಕಾರ ರೈತರ ಉತ್ಪಾದನಾ ವೆಚ್ಚವನ್ನು ಪರಿಗಣಿಸಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡದಿರುವುದರಿಂದ ರೈತರಿಗೆ ಯಾವುದೇ ರೀತಿಯಲ್ಲಿ ಅನುಕೂಲವಾಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸ್ವಾಮಿನಾಥನ್ ವರದಿ ಪ್ರಕಾರ ರೈತರು ಯಾವುದೇ ಬೆಳೆ ಬೆಳೆಯಲು, ಬೀಜ, ಗೊಬ್ಬರ, ಕ್ರಿಮಿನಾಶಕ ಹಾಗೂ ಕೂಲಿಗೆ ಖರ್ಚು ಮಾಡಿರುವುದರ ಜೊತೆಗೆ ರೈತನ ಕುಟುಂಬದ ಸದಸ್ಯರ ಕೂಲಿ ಹಾಗೂ ಬೆಳೆ ಬೆಳೆಯಲು ಬಳಸಿದ ಭೂಮಿಯ ಬಾಡಿಗೆಯನ್ನೂ ಸೇರಿಸಿ ಉತ್ಪಾದನಾ ವೆಚ್ಚ ಪರಿಗಣಿಸಬೇಕು. ಅದರ ಆಧಾರದಲ್ಲಿ ಕೇಂದ್ರ ಸರ್ಕಾರ ಉತ್ಪಾದನಾ ವೆಚ್ಚದ 1.5 ರಷ್ಟು ಬೆಂಬಲ ಬೆಲೆ ನೀಡಬೇಕು. ಆಗ ರೈತನ ಬೆಳೆಗೆ ನಿಜವಾದ ಬೆಲೆ ದೊರೆತಂತಾಗುತ್ತದೆ.
ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಅನೇಕ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅಂತಹ ರೈತರನ್ನು ಗುರುತಿಸಿ ಅವರಿಗೂ ಅನುಕೂಲವಾಗುವ ರೀತಿ ಕೇಂದ್ರ ಸರ್ಕಾರ ತೀರ್ಮಾನ ಮಾಡಬೇಕು. ಈಗಾಗಲೇ ಘೋಷಣೆ ಮಾಡಿರುವ ಬೆಂಬಲ ಬೆಲೆ ಅವೈಜ್ಞಾನಿಕವಾಗಿದ್ದು, ಅದನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.