Advertisement

ಸಿದ್ದರಾಮಯ್ಯದು ಕಮಾಯಿ ಕಿ ಬಾತ್‌: ಬಿಎಸ್‌ವೈ

07:10 AM Dec 18, 2017 | Team Udayavani |

ಬೆಂಗಳೂರು: ಪ್ರಧಾನಿ ಮೋದಿಯವರದ್ದು ಮನ್‌ ಕಿ ಬಾತ್‌ ಆದರೆ, ನಮ್ಮದು ಕಾಮ್‌ ಕಿ ಬಾತ್‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಸಿದ್ದರಾಮಯ್ಯನವರದ್ದು ಕಾಮ್‌ ಕಿ ಬಾತ್‌ ಅಲ್ಲ, ಬದಲಾಗಿ “ಕಮಾಯಿ ಕಿ ಬಾತ್‌’, ಲೂಟ್‌ ಕಿ ಬಾತ್‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕಟುವಾಗಿ ಟೀಕಿಸಿದ್ದಾರೆ.

Advertisement

ರಾಜ್ಯ ಬಿಜೆಪಿ ವತಿಯಿಂದ ಭಾನುವಾರ ಹಳೆ ವಿಮಾನ ನಿಲ್ದಾಣ ರಸ್ತೆಯ ಮುರಗೇಶಪಾಳ್ಯದ ಸರ್‌. ಎಂ. ವಿಶ್ವೇಶ್ವರಯ್ಯ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಪೂರ್ವ ಭಾಗದ ಏಳು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಪರಿವರ್ತನಾ ಯಾತ್ರೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೋದಿಯವರ ಮುಂದೆ ನೀವೊಬ್ಬ “ಬಚ್ಚಾ’ ಸಿದ್ದರಾಮಯ್ಯನವರೇ. ಅಮೇರಿಕಾದ ಅಧ್ಯಕ್ಷ ಟ್ರಂಪ್‌, ಜಪಾನ್‌ ಪ್ರಧಾನಿ, ರಷ್ಯಾದ ಅಧ್ಯಕ್ಷ ಸೇರಿದಂತೆ ಜಗತ್ತಿನ ದಿಗ್ಗಜರು ಮೋದಿಯವರ ಆಡಳಿತವನ್ನು ಮೆಚ್ಚಿಕೊಂಡಿರುವಾಗ, ನಿಮ್ಮದು ಯಾವ ಲೆಕ್ಕ. ಲೋಕಸಭೆಗೆ ಈಗ ಚುನಾವಣೆ ನಡೆದರೆ ಶೇ.75ರಷ್ಟು ಜನ ಮೋದಿಯವರನ್ನು ಬೆಂಬಲಿಸುತ್ತಾರೆ ಎಂದು ಸಮೀಕ್ಷೆ ಹೇಳುವಾಗ, ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅಚ್ಚೇ ದಿನ್‌ ಯಾವಾಗ ಬರುತ್ತವೇ ಎಂದು ಸಿದ್ದರಾಮಯ್ಯ ಪದೇ ಪದೇ ಕೇಳುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ನಾಶವಾಗಿ ಹೋದಾಗ ಆಚ್ಚೇ ದಿನ್‌ ಪ್ರಾರಂಭವಾಗುತ್ತವೆ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.

ದಲಿತರ ಬಗ್ಗೆ ಈಗಲಾದರೂ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ “ಬಡಿಗೆ ಹಿಡಿದು ಬೆನ್ನಟ್ಟುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. 50 ವರ್ಷ ದಲಿತರ ಮತ ಪಡೆದು ಅವರನ್ನು ಅದೇ ಸ್ಥಿತಿಯಲ್ಲಿಟ್ಟ ಕಾಂಗ್ರೆಸ್‌ ಪಕ್ಷ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

ದಲಿತರ ಮನೆಗಳಲ್ಲಿ ವಾಸ್ತವ್ಯ ಮಾಡಿ, ಕುಟುಂಬಗಳನ್ನು ನನ್ನ ಮನೆಗೆ ಕರೆಸಿ ಸತ್ಕರಿಸಿದಾಗ, ದಲಿತರೊಂದಿಗೆ ಸಂಬಂಧ ಬೆಳಸಿ ಎಂದು ನೀವು ಹಗುರವಾಗಿ ಮಾತನಾಡಿದ್ದೀರಿ, ನಿಮ್ಮ ಯೋಗ್ಯತೆಗಂತೂ ದಲಿತರ ಮನೆಗೆ ಹೋಗಲು ಆಗಿಲ್ಲ, ಭಾಗ್ಯಲಕ್ಷ್ಮಿ ಯೋಜನೆ ಹಾಗೂ ಶಾಲಾ ಮಕ್ಕಳಿಗೆ ಬೈಸಿಕಲ್‌ ವಿತರಿಸುವ ಕಾರ್ಯಕ್ರಮದ ಬಗ್ಗೆ ಹರಿದ ಸೀರೆ, ಮುರಿದ ಸೈಕಲ್‌ ಎಂದು ಕೀಳುಮಟ್ಟದ ಟೀಕೆ ಮಾಡಿದ್ದೀರಿ. ಈಗಲಾದರೂ ದಲಿತರ ಬಗ್ಗೆ ಈ ರೀತಿ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ ಇಲ್ಲದಿದ್ದರೆ, ರಾಜ್ಯದ ದಲಿತರು ಬಡಿಗೆ ಹಿಡಿದು ನಿಮ್ಮನ್ನು ಬೆನ್ನಟ್ಟುತ್ತಾರೆ’ ಎಂದರು.

ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ: ರಾಜ್ಯದ 112 ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡಿದ್ದೇನೆ. ರೈತರು, ಮಹಿಳೆಯರು, ಯುವಕರಿಂದ ದೇವ ದುರ್ಲಭ ಸ್ವಾಗತ ಸಿಗುತ್ತಿದೆ. ಮುಂದಿನ ಬಾರಿ 150 ಸೀಟುಗಳು ಗೆದ್ದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ-ಚಂದ್ರನಷ್ಟೇ ಸತ್ಯ. ಅಧಿಕಾರಕ್ಕೆ ಬಂದ ಮೇಲೆ ಸ್ವತ್ಛ, ಪ್ರಾಮಾಣಿಕ ಹಾಗೂ ದಕ್ಷ ಆಡಳಿತ ನೀಡುತ್ತೇನೆ ಎಂದು ಈ ನಾಡಿನ 6 ಕೋಟಿ ಜನತೆಗೆ ಭರವಸೆ ನೀಡುತ್ತೇನೆ. ಪಕ್ಷದ ಕಾರ್ಯಕರ್ತರು ನಾಲ್ಕು ತಿಂಗಳ ಸಮಯ ಕೊಡಿ, ಬೂತ್‌ ಮಟ್ಟದಲ್ಲಿ ಪಕ್ಷ ಬಲಪಡಿಸಿ, ಮತದಾನದ ದಿನ ಶೇ.70ರಷ್ಟು ಮತದಾನ ಆಗುವಂತೆ ಕೆಲಸ ಮಾಡಿ, ಮುಂದಿನ ಐದು ವರ್ಷ ನೆಮ್ಮದಿಯಿಂದ ಬದುಕುವಂತಹ ವ್ಯವಸ್ಥೆ ನಾನು ಮತ್ತು ಪಕ್ಷದ ಮುಖಂಡರು ಮಾಡಿಕೊಡುತ್ತೇವೆ ಎಂದು ಯಡಿಯೂರಪ್ಪ ಇದೇ ವೇಳೆ ಭರವಸೆ ನೀಡಿದರು.

Advertisement

ಬಿಜೆಪಿ 25 ಸೀಟು ಗೆಲ್ಲುತ್ತೇ: ಅನಂತಕುಮಾರ್‌
ಕರ್ನಾಟಕದಲ್ಲಿ ಬಿಜೆಪಿ 25 ಸೀಟು ಗೆಲ್ಲುತ್ತದೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಬಾಯಿತಪ್ಪಿ ಹೇಳಿದ ಪ್ರಸಂಗ ಪರಿವರ್ತನಾ ಯಾತ್ರೆಯಲ್ಲಿ ನಡೆಯಿತು.

ಭಾಷಣ ಆರಂಭಿಸಿದ ಅನಂತಕುಮಾರ್‌, ರಾಜ್ಯದ 224 ಕ್ಷೇತ್ರಗಳಲ್ಲಿ ಬಿಜೆಪಿಗೆ ಇಲ್ಲಿನ ಜನ 150 ಸೀಟು ಕೊಡಲಿದ್ದಾರೆ. ಇದರಲ್ಲಿ ಬೆಂಗಳೂರಿನ 1 ಕೋಟಿ ಜನ ಸೇರಿ ಎಷ್ಟು ಸೀಟು ಕೊಡುತ್ತಾರೆ ಎಂದು ರಾಜನಾಥ್‌ ಸಿಂಗ್‌ ಕೇಳುತ್ತಿದ್ದಾರೆ. ಮಾತಿನ ಭರಾಟೆ, ಉತ್ಸಾಹದಲ್ಲಿದ್ದ ಅನಂತಕುಮಾರ್‌, ಬೆಂಗಳೂರು ಎಂದು ಹೇಳುವ ಬದಲು “ಕರ್ನಾಟಕದಲ್ಲಿ 25 ಸೀಟು ಗೆಲ್ಲುತ್ತೇವೆ’ ಎಂದು ನಿಮ್ಮ ಪರವಾಗಿ ರಾಜನಾಥ್‌ಸಿಂಗ್‌ ಅವರಿಗೆ “ಪ್ರಾಮಿಸ್‌’ ಮಾಡಲಾ ಎಂದು ಸಭಿಕರಿಗೆ ಎರಡು ಬಾರಿ ಕೇಳಿದರು. ಇದನ್ನೇ ಹಿಂದಿಯಲ್ಲಿ ರಾಜನಾಥ್‌ಸಿಂಗ್‌ ಅವರಿಗೆ ಹೇಳುವಾಗ ತಪ್ಪು ಸರಿಪಡಿಸಿಕೊಂಡ ಅನಂತಕುಮಾರ್‌, “ಪೂರೇ ರಾಜ್‌Â ಮೆ 150 ಸೀಟ್‌ ಜೀತೆಂಗೆ, ಬೆಂಗಳೂರ್‌ ಮೇ ಮೋದಿ, ಅಮಿತ್‌ ಷಾ ಔರ್‌ ಆಪ್‌ ಕೆ ಆಶಿರ್ವಾದ ಸೇ ಔರ್‌ ಯಡಿಯೂರಪ್ಪ ಕೆ ನೇತೃತ್‌ ಮೆ 25 ಸೀಟ್‌ ಜೀತೆಂಗೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌,ಡಿ.ವಿ. ಸದಾನಂದಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌,ಮಾಜಿ ಸಚಿವರಾದ ವಿ. ಸೋಮಣ್ಣ, ಸುರೇಶ್‌ಕುಮಾರ್‌, ಬಿ.ಜೆ. ಪುಟ್ಟಸ್ವಾಮಿ, ಕಟ್ಟಾ ಸುಬ್ರಮಣ್ಯನಾಯ್ಡು, ಅರವಿಂದ ಲಿಂಬಾವಳಿ, ಶಾಸಕರಾದ ಸಿ. ರಘು, ವೈ.ಎ. ನಾರಾಯಣಸ್ವಾಮಿ, ರಾಮಚಂದ್ರಗೌಡ, ಡಿ.ಎಸ್‌. ವೀರಯ್ಯ, ಮಾಜಿ ಶಾಸಕ ನಂದೀಶ್‌ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

“ಜನಹಿತ ಮರೆತು ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯಾರ ಪರಿವರ್ತನೆ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಸಮಾಜ ಒಡೆಯುವ, ಓಲೈಕೆ ರಾಜಕಾರಣ ಮಾಡುವ ಅವರ ಕೊಳಕು ಮನಸ್ಸಿನ ಪರಿವರ್ತನೆ ಆಗಬೇಕಿದೆ. .
– ಶೋಭಾ ಕರಂದ್ಲಾಜೆ, ಸಂಸದೆ.

Advertisement

Udayavani is now on Telegram. Click here to join our channel and stay updated with the latest news.

Next