Advertisement

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

11:53 PM May 17, 2024 | Team Udayavani |

ಬೆಂಗಳೂರು: ಬರ ಪರಿಹಾರದ ಮೊತ್ತವನ್ನು ಯಾವುದೇ ಕಾರಣಕ್ಕೂ ಸಾಲದ ಖಾತೆಗೆ ಕಡಿತಗೊಳಿಸಬಾರದು. ಒಂದು ವೇಳೆ ಇದು ಆಗುತ್ತಿದ್ದರೆ, ಕೂಡಲೇ ತಾಕೀತು ಮಾಡುವುದರ ಜತೆಗೆ ಬ್ಯಾಂಕ್‌ಗಳಿಗೂ ಪತ್ರ ಬರೆದು ಸೂಚನೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ವಿಧಾನಸೌಧದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬರ ಪರಿಹಾರ, ಮುಂಗಾರು ಸಿದ್ಧತೆಗಳು, ಶಿಕ್ಷಣ ಮತ್ತಿತರ ವಿಷಯಗಳ ಕುರಿತು ನಡೆಸಿದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ಪಿಂಚಣಿ, ನರೇಗಾ ಕೂಲಿಗೆ ಸಂಬಂಧಪಟ್ಟ ಹಣವು ರೈತರ ಬ್ಯಾಂಕ್‌ಗಳಿಗೆ ಜಮೆಯಾಗುತ್ತಿದ್ದರೆ ಅದನ್ನು ಬ್ಯಾಂಕ್‌ಗಳು ರೈತರ ಸಾಲಗಳಿಗೆ ವಜಾ ಮಾಡಿಕೊಳ್ಳಬಾರದು. ಹೀಗಾಗಿ ಬ್ಯಾಂಕ್‌ಗಳಿಗೆ ಖಡಕ್‌ ಸೂಚನೆ ನೀಡಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಬರ ಹಾಗೂ ಮಳೆ ಹಿನ್ನೆಲೆಯಲ್ಲಿ ಆಡಳಿತಾತ್ಮಕ ದೃಷ್ಟಿಯಿಂದ ಚುನಾವಣ ನೀತಿ ಸಂಹಿತೆಯನ್ನು ಕೊಂಚ ಸಡಿಲಗೊಳಿಲಾಗಿದೆ. ಕಾಮಗಾರಿಗಳ ಬಾಕಿ ಬಿಲ್‌ ಬಿಡುಗಡೆ ಮಾಡಲು ಆಯೋಗದಿಂದ ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗಪಡಿಸಿಕೊಂಡು ರೈತರಿಗೆ ಅನುಕೂಲ ಆಗುವಂತೆ ಮಾಡಬೇಕು. ಮುಂಗಾರು ಮಳೆ ಮತ್ತು ಅದಕ್ಕೆ ಪೂರಕವಾಗಿ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮತ್ತಿತರ ಕಾರ್ಯಗಳಿಗೆ ಈಗಿನಿಂದಲೇ ಸಿದ್ಧತೆ ಆರಂಭಿಸ
ಬೇಕು ಎಂದು ಸೂಚಿಸಿದರು ಎನ್ನಲಾಗಿದೆ.

ಅಭಿವೃದ್ಧಿ ಕಾಮಗಾರಿಗಳಿಗೆ ಇಲಾಖಾವಾರು ಟೆಂಡರ್‌ ಕರೆಯಲು ಚುನಾವಣ ಆಯೋಗದಿಂದ ಅವಕಾಶ ಸಿಕ್ಕಿದೆ. ಅಲ್ಲದೆ, ಸಿಎಂ ಹಾಗೂ ಸಚಿವರು ಅಧಿಕಾರಿಗಳ ಜತೆ ವೀಡಿಯೋ ಸಂವಾದ ನಡೆಸಲು ಅನುಮತಿ ನೀಡಲಾಗಿದೆ. ಆದರೆ ಜಿಲ್ಲೆಗಳಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಲು ನಿರ್ಬಂಧ ಮುಂದುವರಿದಿದೆ. ಜೂನ್‌ ಒಳಗೆ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಮುಗಿಸಬೇಕು ಎಂದು ಸಭೆಯಲ್ಲಿ ಸಿಎಂ ಸೂಚನೆ ನೀಡಿದರು.

ಇತ್ತೀಚೆಗೆ ಎಚ್‌.ಡಿ. ಕುಮಾರಸ್ವಾಮಿ, ರೈತರ ಸಾಲಕ್ಕೆ ಬರ ಪರಿಹಾರ ಹೋಗುತ್ತಿದ್ದು, ಸರಕಾರ ಕೈಕಟ್ಟಿ ಕುಳಿತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ “ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಸಿಎಂ ಸಭೆ ನಡೆಸಿದ್ದಾರೆ. ಸರಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next