Advertisement

ಆರ್ಥಿಕತೆ ನೆಲಕಚ್ಚಿಸಿದ್ದೇ ಮೋದಿ ಸರ್ಕಾರದ ಸಾಧನೆ: ಸಿದ್ದರಾಮಯ್ಯ ಟೀಕೆ

12:15 PM Jun 03, 2022 | Team Udayavani |

ಬೆಂಗಳೂರು: ಭಾರತದ ಆರ್ಥಿಕತೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ದುರಾಡಳಿತವು ನೆಲ ಕಚ್ಚುವಂತೆ ಮಾಡಿದೆ. ಇದೇ ಅವರ ಎಂಟು ವರ್ಷಗಳ ಸಾಧನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.

Advertisement

ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಆಗಿದ್ದು 8 ವರ್ಷ. ಆದರೆ ದೇಶದ ಅಭಿವೃದ್ಧಿ ಮಾತ್ರ 20 ವರ್ಷ ಹಿಂದಕ್ಕೆ ಕುಸಿದಿದೆ.  ದೇಶ ವಿಶ್ವಗುರುವಾಗುವ ಬದಲು ಪಾತಾಳದತ್ತ ಕುಸಿಯುತ್ತಿದೆ. ಇದನ್ನು ನಾನು ಸೃಷ್ಟಿಸಿಕೊಂಡು ಹೇಳುತ್ತಿಲ್ಲ. ಸರ್ಕಾರದ ದಾಖಲೆಗಳೇ ಹೇಳುತ್ತಿವೆ. ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿಯ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬೆಲೆ ಏರಿಕೆ ಹಿಂದೆಂದೂ ಇಲ್ಲದ ಮಟ್ಟಕ್ಕೆ ಮುಟ್ಟಿದೆ. ಹಣದುಬ್ಬರ ಕಳೆದ 17 ವರ್ಷಗಳಲ್ಲಿ ತೀವ್ರಗತಿಗೆ ಮುಟ್ಟಿದೆ. ನಿರುದ್ಯೋಗ ತಾರಕಕ್ಕೇರಿದೆ. ರಾಜ್ಯಗಳ ಆರ್ಥಿಕತೆ ಕುಸಿದು ಹೋಗುತ್ತಿದೆ. ಒಕ್ಕೂಟ ವ್ಯವಸ್ಥೆ ಶಿಥಿಲವಾಗುತ್ತಿದೆ. ಇದರ ಜೊತೆಯಲ್ಲಿ ದೇಶದ ಪ್ರಜಾತಾಂತ್ರಿಕೆಯೂ ಭಯಭೀತವಾಗಿದೆ ಎಂದರು.

ಡಿ ಮಾನಿಟೈಸೇಷನ್- ಜಿಎಸ್‍ಟಿ ವ್ಯವಸ್ಥೆ, ಕೊರೋನ ಸಾಂಕ್ರಾಮಿಕದ ಎಡಬಿಡಂಗಿ ನಿರ್ವಹಣೆಗಳು ದೇಶದ ಬೆನ್ನುಮೂಳೆಯನ್ನು ಟೊಳ್ಳು ಮಾಡಿವೆ ದೇಶದ ಜನರು ಕಷ್ಟಪಟ್ಟು ಕಟ್ಟಿದ್ದ ಲಾಭದಾಯಕ ಸಂಸ್ಥೆ/ ಕಂಪೆನಿ/ ಕಾರ್ಖಾನೆಗಳನ್ನು ಖಾಸಗಿಯವರಿಗೆ ಬಿಡಿಗಾಸಿಗೆ ಮಾರಾಟ ಮಾಡಲಾಗುತ್ತಿದೆ. ರೈತ, ಕಾರ್ಮಿಕ, ಮಹಿಳೆ, ಯುವಜನರ ವಿರೋಧಿಯಾದ ಕಾನೂನುಗಳನ್ನು ಜಾರಿಗೆ ತಂದು ಮೂಲಕ ಜನರನ್ನು ಶತ್ರುಗಳಂತೆ ಭಾವಿಸಿ ದಮನಿಸಲಾಗುತ್ತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಇದನ್ನೂ ಓದಿ:ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 566 ಅಂಕ ಏರಿಕೆ; ಜೂ.03ರಂದು ಲಾಭ, ನಷ್ಟ ಕಂಡ ಷೇರು ಯಾವುದು?

Advertisement

ಜನರನ್ನು ಬಡತನದ ದವಡೆಗೆ ತಳ್ಳಲಾಗುತ್ತಿದೆ. ಅಂಬಾನಿ, ಅದಾನಿಗಳಂಥ ಕಾರ್ಪೊರೇಟ್ ಬಂಡವಾಳಿಗರನ್ನು ಕೊಬ್ಬಿಸಿ ಮೆರೆಸಲಾಗುತ್ತಿದೆ. ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಈ ಎಂಟು ವರ್ಷಗಳಲ್ಲಿ ಮಾಡಿದ್ದೇನು? ತಮ್ಮ ಸ್ನೇಹಿತರಾದ ಬಂಡವಾಳಿಗರ ಸಂಪತ್ತು ಹೆಚ್ಚಿಸುವಂತೆ ನೋಡಿಕೊಂಡಿದ್ದು ಮತ್ತು ಜನರಿಗೆ ಸುಳ್ಳು ಹೇಳುತ್ತಾ ಬಂದಿದ್ದಷ್ಟೆ ಇವರ ಕೆಲಸ. ಕೆಲವು ಬಿಜೆಪಿ ವಕ್ತಾರ ಮೀಡಿಯಾಗಳು ಆರ್ಥಿಕತೆ ಉತ್ತಮವಾಗಿದೆ ಎಂದು ತುತ್ತೂರಿ ಊದುತ್ತಿವೆ. ಆರ್ಥಿಕತೆಯ ವಾಸ್ತವವನ್ನು ಅರ್ಥ ಮಾಡಿಕೊಂಡರೆ ಮಾತ್ರ ಎದೆ ಒಡೆದು ಹೋದಂತಾಗುತ್ತದೆ ಎಂದರು.

ಭಾರತದಲ್ಲಿ ಕೆಲವರ ಸಂಪತ್ತು ಮಾತ್ರ ಹೆಚ್ಚುತ್ತಿದೆ. ಜನರ ತಲೆಯ ಮೇಲೆ ಸಾಲದ ಶೂಲವನ್ನು ಏರಿಸಲಾಗಿದೆ. ದೇಶದ ಸಾಲವನ್ನು ಯಾವ ಮಟ್ಟಕ್ಕೆ ಏರಿಸಲಾಗಿದೆಯೆಂದರೆ ಸರ್ಕಾರದ ದಾಖಲೆಗಳ ಪ್ರಕಾರ 2014 ರ ಮಾರ್ಚ್ ವೇಳೆಗೆ ಕೇಂದ್ರ ಸರ್ಕಾರ ಮಾಡಿರುವ ಸಾಲ 53.11 ಲಕ್ಷ ಕೋಟಿ ರೂಗಳಷ್ಟಿತ್ತು. ಇದು ದೇಶವು ಸ್ವಾತಂತ್ರ್ಯ ಗಳಿಸಿಕೊಂಡಾಗಿನಿಂದ ಮಾಡಿದ್ದ ಸಾಲ. ಈ ಸಾಲವು 2019-20 ರ ವೇಳೆಗೆ 106.45 ಲಕ್ಷ ಕೋಟಿಗೆ ಏರಿಕೆಯಾಯಿತು. 2022 ರ ಮಾರ್ಚ್-31 ರ ವೇಳೆಗೆ 139.57 ಲಕ್ಷ ಕೋಟಿಗಳಿಗೆ ತಲುಪಿದೆ. 2023 ರ ಮಾರ್ಚ್ ಅಂತ್ಯದ ವೇಳೆಗೆ 155 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇದೇ ಸಂದರ್ಭದಲ್ಲಿ ದೇಶದ ರಾಜ್ಯಗಳ ಸಾಲವೂ ಆತಂಕಕಾರಿಯಾಗುವಂತೆ ಏರಿಕೆಯಾಗಿದೆ. 2013-14 ರಲ್ಲಿ ಎಲ್ಲ ರಾಜ್ಯಗಳ ಒಟ್ಟು ಸಾಲ 22.12 ಲಕ್ಷ ಕೋಟಿಗಳಷ್ಟಿತ್ತು. ಅದು ಇದೇ ಮಾರ್ಚ್ ಅಂತ್ಯಕ್ಕೆ 70 ಲಕ್ಷ ಕೋಟಿಗೆ ಮುಟ್ಟಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಇದು 80 ಲಕ್ಷ ಕೋಟಿಗೆ ತಲುಪುತ್ತಿದೆ. ಇದರಿಂದಾಗಿ ದೇಶದ ಒಟ್ಟಾರೆ ಸಾಲ 235 ಲಕ್ಷ ಕೋಟಿಗಳಾಗಬಹುದು. ಇದು 2014 ರ ಮಾರ್ಚ್ 31 ರಂದು 75.23 ಲಕ್ಷ ಕೋಟಿಗಳಷ್ಟಿತ್ತು. ಇದರಿಂದಾಗಿ ದೇಶದ ಪ್ರತಿ ಪ್ರಜೆಯ ತಲೆಯ ಮೇಲೆ 170290 ರೂಪಾಯಿಗಳಷ್ಟು ಸಾಲ ಹೇರಿದಂತಾಗುತ್ತದೆ. 2014 ರಲ್ಲಿ ದೇಶದ ಜನಸಂಖ್ಯೆ 130 ಕೋಟಿಯಷ್ಟಿತ್ತು. ಆಗ ಪ್ರತಿಯೊಬ್ಬರ ತಲೆಯ ಮೇಲಿದ್ದ ಸಾಲದ ಪ್ರಮಾಣ 57692 ರೂ ಗಳಷ್ಟಿತ್ತು. ಇದು ಮೋದಿಯವರ ಮೊದಲ ಬೃಹತ್ ಸಾಧನೆ. ಜನರ ತಲೆಯ ಮೇಲಿನ ಸಾಲವನ್ನು ಸುಮಾರು 3 ಪಟ್ಟು ಅಥವಾ ಶೇ. 300 ರಷ್ಟು ಹೆಚ್ಚಿಸಿದ್ದು ಮೋದಿಯವರ ಸಾಧನೆ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next