Advertisement

ಜನರನ್ನು ಭೀತಿಗೊಳಿಸಬೇಡಿ, ವೈಜ್ಞಾನಿಕವಾಗಿ ನಡೆದುಕೊಳ್ಳುವಂತೆ ಮಾಡಿ:CMಗೆ ಸಿದ್ದರಾಮಯ್ಯ ಪತ್ರ

03:57 PM Mar 25, 2021 | Team Udayavani |

ಬೆಂಗಳೂರು : ಕೋವಿಡ್‍ನ ಎರಡನೇ ಅಲೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಅತ್ಯಂತ ವೈಜ್ಞಾನಿಕವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಜನರನ್ನು ಹೆಚ್ಚು ಭೀತಿಗೆ ಒಳಪಡಿಸದೇ ಆರ್ಥಿಕ ಚಟುವಟಿಕೆಗಳನ್ನು ನಿರ್ಬಂಧಿಸದೆ ಜನರು ವೈಜ್ಞಾನಿಕವಾಗಿ ನಡೆದುಕೊಳ್ಳುವಂತೆ ತಿಳುವಳಿಕೆಯನ್ನು ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕಡ್ಡಾಯವಾಗಿ ಮಾಸ್ಕ್ ಧರಿಸುವ, ಸ್ಯಾನಿಟೈಸರ್ ಬಳಸುವ, ಸಣ್ಣ ರೋಗ ಲಕ್ಷಣಗಳು ಕಂಡು ಬಂದರೂ ಜನರೊಂದಿಗೆ ಬೆರೆಯದೆ ಪ್ರತ್ಯೇಕವಾಗಿ ಉಳಿಯುವ, ಪರೀಕ್ಷೆ ಮಾಡಿಸಿಕೊಳ್ಳುವ ಮುಂತಾದವುಗಳನ್ನು ಸ್ವಯಂಪ್ರೇರಿತವಾಗಿ ಮುಂಜಾಗೃತೆಯ ಕ್ರಮಗಳನ್ನು ಕೈಗೊಳ್ಳಲು ಉತ್ತೇಜಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಕೋವಿಡ್ ಸೋಂಕು ತಡೆಗೆ ಬೆಂಗಳೂರಿನಲ್ಲಿ ಹೊಸ ನಿಯಮಗಳು: ನೆಗೆಟಿವ್ ವರದಿ ಕಡ್ಡಾಯ, ಕೈಗೆ ಸೀಲ್

ಸರ್ಕಾರ ಕೋವಿಡ್ ಸಾವುಗಳ ವಿಚಾರದಲ್ಲೂ ಕೂಡ ಸುಳ್ಳು ಹೇಳುತ್ತಿದೆ. ಇದುವರೆಗೂ ರಾಜ್ಯದಲ್ಲಿ 12,449 ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರದ ಸಾಂಖ್ಯಿಕ ಇಲಾಖೆಯು ಸಂಗ್ರಹಿಸುವ ಜನನ, ಮರಣಗಳ ಅಂಕಿ ಅಂಶಗಳ ಪ್ರಕಾರ ಸಾವುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರ ಕೊರೋನಾ ವಾರಿಯರ್‍ ಗಳು ಎಂದು ಬರಿ ಬಾಯಿ ಮಾತಿಗೆ ಹೇಳಿತೆ ಹೊರತು ಕೊರೋನಾದಿಂದ ಮೃತಪಟ್ಟ ಅನೇಕರ ಕುಟುಂಬಗಳಿಗೆ ಇನ್ನೂ ಪರಿಹಾರವನ್ನೇ ನೀಡಿಲ್ಲ. ಕುಶಲ ಕರ್ಮಿಗಳು ಹಾಗೂ ದುಡಿಯುವ ಕೆಲವೇ ಸಮುದಾಯಗಳಿಗೆ ಘೋಷಿಸಿದ್ದ ಪರಿಹಾರವನ್ನು ಕೂಡ ಸಮರ್ಪಕವಾಗಿ ವಿತರಿಸಲಿಲ್ಲ. ಈಗಲೂ ಈ ಸಮುದಾಯಗಳ ವೃತ್ತಿನಿರತರ ಬದುಕು ಸುಧಾರಣೆಯಾಗಿಲ್ಲ. ಹಾಗಾಗಿ ಅವರೆಲ್ಲರಿಗೂ ಪರಿಹಾರವನ್ನು ನೀಡಬೇಕು. ನಾನು ಪದೇ ಪದೇ ಪ್ರಸ್ತಾಪಿಸುತ್ತಿದ್ದೇನೆ. ದುಡಿಯುವ ಜನರ ಕೈಯಲ್ಲಿ ಹಣ ಇದ್ದರೆ ದೇಶದ ಆರ್ಥಿಕತೆ ಆರೋಗ್ಯಕರವಾಗಿರುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

Advertisement

ಇದನ್ನೂ ಓದಿ: ಮಾಸ್ಕ್ ಧರಿಸದೆ ಓಡಾಡುವವರಿಗೆ ಮಾಸ್ಕ್ ವಿತರಿಸಿದ ಉಡುಪಿ ಪೊಲೀಸರು

ಸರ್ಕಾರ ಹೆಚ್ಚು ಪರೀಕ್ಷೆಗಳನ್ನು ಮಾಡುವ ಮೂಲಕ ಹಾಗೂ ಸುರಕ್ಷತಾ ಲಸಿಕೆಗಳನ್ನು ನೀಡುವ ಮೂಲಕ, ವಯಸ್ಸಾದ ಹಿರಿಯರನ್ನು ಮತ್ತು ಇತರೆ ಸಹ ಅಸ್ವಸ್ಥತೆಗಳನ್ನು ಹೊಂದಿರುವವರ ಆರೋಗ್ಯವನ್ನು ವಿಶೇಷವಾಗಿ ಪರಿಗಣಿಸಿ ಎಚ್ಚರಿಕೆಯನ್ನು ವಹಿಸಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಜನರ ಆರೋಗ್ಯವನ್ನು ರಕ್ಷಿಸುವ ಜೊತೆಯಲ್ಲಿಯೇ ಅವರ ಆರ್ಥಿಕ ಆರೋಗ್ಯವನ್ನು ಕೂಡ ರಕ್ಷಿಸಬೇಕಾಗಿದೆ. ಇಲ್ಲದಿದ್ದರೆ ಇಡೀ ದೇಶದ ಆರ್ಥಿಕ ಚೈತನ್ಯಕ್ಕೆ ಲಕ್ವಾ ಹೊಡೆದಂತಾಗುತ್ತದೆ. ಈಗಾಗಲೇ ನಮ್ಮ ಆರ್ಥಿಕತೆ ಐ.ಸಿ.ಯು.ಗೆ ಹೋದ ರೋಗಗ್ರಸ್ಥನಂತಾಗಿದೆ. ಸರ್ಕಾರ ತಜ್ಞರ, ಮುತ್ಸದ್ದಿಗಳೊಂದಿಗೆ ಸಮಾಲೋಚಿಸಿ ಪರಿಸ್ಥಿತಿಯನ್ನು ನಿಯಂತ್ರಿಸಬೇಕು ಎಂದು ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next