Advertisement

ಸಿದ್ದರಾಮಯ್ಯರನ್ನು ಬಾದಾಮಿಯಲ್ಲಿ ಗೆಲ್ಲಿಸಿದ್ದೇ ನಾನು; ಸಿ ಎಂ ಇಬ್ರಾಹಿಂ

06:17 PM Jan 26, 2023 | Team Udayavani |

ಅಥಣಿ: ಸಿದ್ದರಾಮಯ್ಯನವರನ್ನು ಬಾದಾಮಿಯಲ್ಲಿ ಆರಿಸಿ ತಂದಿದ್ದೇ ನಾನು. ಅವರು ಇವತ್ತು ಸರಿಯಾದ ಕ್ಷೇತ್ರ ಇಲ್ಲದೆ ಪರದಾಡುವಂತಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮೊದಲು ತಾವು ಸ್ಪರ್ಧಿಸುವ ಕ್ಷೇತ್ರವನ್ನು ಭದ್ರ ಮಾಡಿಕೊಳ್ಳಲಿ. ತಮ್ಮ ಸ್ವ ಪ್ರಯತ್ನದಿಂದ ಗೆದ್ದು ತೋರಿಸಲಿ, ನಂತರ ಇನ್ನೊಬ್ಬರ ಬಗ್ಗೆ ಟೀಕಿಸಲಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ವ್ಯಂಗ್ಯವಾಡಿದರು.

Advertisement

ಅವರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ಜೆಡಿಎಸ್‌ ಪಕ್ಷವನ್ನು ಬಿಜೆಪಿ ಬಿ ಟೀಮ್‌ ಎಂದು ಟೀಕಿಸುವುದನ್ನು ಬಿಟ್ಟು ಬದ್ಧತೆಯಿಂದ ವರ್ತಿಸುವುದನ್ನು ಕಲಿಯಲಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾಂಗ್ರೆಸ್ಸಿನ 13 ಜನ ಶಾಸಕರನ್ನು ಮುಂಬೈಗೆ ಕಳಿಸಿದ್ದು ಇದೇ ಸಿದ್ದರಾಮಯ್ಯ. ಬಿಜೆಪಿಯ ಬಿ ಟೀಮ್‌ ಯಾರು ಎಂಬುದು ಆತ್ಮಾವಲೋಕನ ಮಾಡಿಕೊಳ್ಳಲಿ.ಅವರು ಸತೀಶ ಜಾರಕಿಹೊಳಿ ಅವರಿಗೆ ಟಿಕೇಟ ನಿರಾಕರಿಸಿದ್ದರು. ಆದರೆ ಸತೀಶ ಜಾರಕಿಹೊಳಿ ಅವರಿಗೆ ನನ್ನಿಂದಲೇ ಕಾಂಗ್ರೆಸ್ಸಿನ ಬಿ ಫಾರ್ಮ್ ಸಿಗುವಂತಾಯಿತು ಎಂದು ಹೇಳಿದರು.

ದಮ್‌ ಇದ್ರೆ, ತಾಕತ್‌ ಇದ್ರೆ ನನ್ನ ಮೇಲಿನ ಭ್ರಷ್ಟಾಚಾರದ ಆರೋಪವನ್ನು ಸಾಬೀತು ಮಾಡಲಿ ಎಂದು ಹೇಳುವ ಸಿದ್ದರಾಮಯ್ಯನವರು ಈಗ ಲೋಕಾಯುಕ್ತಕ್ಕೆ ಬಂದಿರುವ ದೂರುಗಳಿಗೆ ಮೊದಲು ಉತ್ತರವನ್ನು ನೀಡಲಿ, ಆಮೇಲೆ ಬಹಿರಂಗ ಚರ್ಚೆ ಮಾಡಲಿ. ಸಿದ್ದರಾಮಯ್ಯನವರು ಮಂಡಿಸಿದ ಎಲ್ಲಾ ಬಜೆಟ್‌ಗಳ ಹಿಂದೆ ಮತ್ತು ಪ್ರಮುಖ ಯೋಜನೆಗಳ ಹಿಂದೆ ನನ್ನ ಪರಿಶ್ರಮವಿದೆ. ಅದನ್ನು ಸಿದ್ದರಾಮಯ್ಯನವರು ಮರೆಯಬಾರದು ಎಂದರು.

ಸಿದ್ದರಾಮಯ್ಯ ಮತ್ತು ಡಿಕೆಶಿ ಜಂಟಿಯಾಗಿ ಎಸಿ ಬಸ್ಸುಗಳಲ್ಲಿ ಕುಳಿತು ಐಷಾರಾಮಿ ಯಾತ್ರೆ ಮಾಡುತ್ತಾ ಹೊರಟಿದ್ದಾರೆ. ಇದರಿಂದ ಜನರ ಸಂಕಷ್ಟವನ್ನು ಅರಿಯಲು ಸಾಧ್ಯವಿಲ್ಲ. ಜನರು ಇಂತಹ ಸುಳ್ಳು ಆಶ್ವಾಸನೆಗಳಿಗೆ ಮರುಳಾಗುವುದಿಲ್ಲ. ಎಸಿ ಬಸ್‌ಗಳಲ್ಲಿ ಕುಳಿತು ಜಿಲ್ಲೆಯಿಂದ ಜಿಲ್ಲೆಗೆ ಹೋಗುವ ಮೊದಲು ಪ್ರತಿ ಹಳ್ಳಿಗಳಲ್ಲಿ ಜನರ ಮಧ್ಯೆ ಹೋಗಿ ಅವರ ಸಮಸ್ಯೆಯನ್ನು ಅರಿಯಲಿ ಎಂದು ಹೇಳಿದರು.

ಕುಮಾರಸ್ವಾಮಿಯವರು ಲಾಟರಿ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯನವರ ಮಾತಿಗೆ ತಿರುಗೇಟು ನೀಡಿದ ಸಿ ಎಂ ಇಬ್ರಾಹಿಂ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರ್ಕಾರ ಮಾಡುವ ವಿಚಾರದಲ್ಲಿ ದೇವೇಗೌಡರು ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡುವ ವಿಚಾರ ವ್ಯಕ್ತಪಡಿಸಿದಾಗ ಅಂದು ಇದೇ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ಅವರು ಯಾವುದೇ ಸಂದರ್ಭದಲ್ಲಿ ಲಾಟರಿ ಮುಖ್ಯಮಂತ್ರಿ ಆಗಿಲ್ಲ. ಅವರು ಮುಖ್ಯಮಂತ್ರಿಗಳಾಗಿ ಮಾಡಿದ ಜನಪರ ಕಾರ್ಯಗಳು ಜನಪ್ರಿಯವಾಗಿವೆ. ಅಂದಿನಿಂದ ಇಂದಿನವರೆಗೂ ರಾಜ್ಯದ ಜನರು ಮತ್ತೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲಿ
ಎಂದು ಬಯಸುತ್ತಿದ್ದಾರೆ ಎಂದು ಹೇಳಿದರು.

Advertisement

ಜೆಡಿಎಸ್‌ ಪಕ್ಷ ನುಡಿದಂತೆ ನಡೆವ ಪಕ್ಷ. ನಮ್ಮ ಪಕ್ಷಕ್ಕೆ ಸ್ವಯಂ ಪ್ರೇರಿತರಾಗಿ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದಾರೆ. ಗುಲಾಮ್‌ ನಬಿ ಆಜಾದ್‌ ಮತ್ತು ಡಾ. ಅಂಬೇಡ್ಕರ್‌ ಅವರ ಮೊಮ್ಮಗ ಪಕ್ಷದ ಪ್ರಚಾರಕ್ಕಾಗಿ ಬರುತ್ತಿದ್ದಾರೆ. ಪಕ್ಷವನ್ನು ಎಲ್ಲೆಡೆ ಇನ್ನಷ್ಟು ಗಟ್ಟಿಯಾಗಿ ಸಂಘಟಿಸುವ ಮೂಲಕ ಎಲ್ಲಡೆ ಸ್ಪರ್ಧೆ ಮಾಡುತ್ತೇವೆ. ಶೀಘ್ರದಲ್ಲಿಯೇ ಎಲ್ಲ ಮತಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next