Advertisement

ಒಂದೇ ದಿನ ಎರಡು ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ

10:29 AM May 02, 2017 | Harsha Rao |

ಬೆಂಗಳೂರು: ಭಾನುವಾರವಷ್ಟೇ ದುಬೈ ಪ್ರವಾಸದಿಂದ ಬೆಂಗಳೂರಿಗೆ ಹಿಂತಿರುಗಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ರಿಲ್ಯಾಕ್ಸ್‌ ಮೂಡ್‌ನ‌ಲ್ಲೇ ಇದ್ದರು. ಮೊಮ್ಮಗನ ಒತ್ತಾಸೆಯಂತೆ ಮಧ್ಯಾಹ್ನ ದಿಢೀರ್‌ “ಬಾಹುಬಲಿ- 2′ ತೆಲುಗು ಚಲನಚಿತ್ರ ವೀಕ್ಷಿಸಿದ ಮುಖ್ಯಮಂತ್ರಿ, ಸಂಜೆ ಪೂರ್ವಯೋಜಿತ ಕಾರ್ಯಕ್ರಮದಂತೆ “ನಿರುತ್ತರ’ ಕನ್ನಡ ಸಿನಿಮಾ ವೀಕ್ಷಿಸಿದರು.

Advertisement

ಪುತ್ರ ದಿ. ರಾಕೇಶ್‌ ಸಿದ್ದರಾಮಯ್ಯ ಪುತ್ರ, “ಬಾಹುಬಲಿ-2′ ಸಿನಿಮಾವನ್ನು ತಮ್ಮೊಂದಿಗೇ ಕುಳಿತು ವೀಕ್ಷಿಸಬೇಕೆಂದು ಬಯಸಿದ್ದರಿಂದ ಸಿದ್ದರಾಮಯ್ಯ ಸಿನಿಮಾ ವೀಕ್ಷಣೆಗೆ ಮುಂದಾದರು. ಬೆಂಗಾವಲು ಪಡೆಯ ಭದ್ರತೆ ಇಲ್ಲದೆಯೇ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಮೊಮ್ಮಗನೊಂದಿಗೆ ರಾಜಾಜಿ ನಗರದ ಒರಾಯನ್‌ ಮಾಲ್‌ಗೆ ತೆರಳಿದ
ಮುಖ್ಯಮಂತ್ರಿಗಳು ಮಧ್ಯಾಹ್ನ 2.30ರಲ್ಲಿ ಸಿನಿಮಾ ವೀಕ್ಷಿಸಿದರು.

ಸಿನಿಮಾ ವೀಕ್ಷಣೆ ಬಳಿಕ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನನ್ನ ಮೊಮ್ಮಗ, ಬಾಹುಬಲಿ-2 ಚಲನಚಿತ್ರ ನೋಡಬೇಕೆಂದು ಆಸೆ ಪಟ್ಟಿದ್ದ. ನನ್ನ ಜತೆಯಲ್ಲೇ ಕುಳಿತು ಚಿತ್ರ ವೀಕ್ಷಿಸಬೇಕೆಂದು ಬಯಸಿದ್ದ. ಹಾಗಾಗಿ ಅವನೊಂದಿಗೆ ಸಿನಿಮಾ
ವೀಕ್ಷಿಸಿದ್ದೇನೆ’ ಎಂದು ತಿಳಿಸಿದರು. ಬಳಿಕ ಪೂರ್ವನಿಗದಿಯಂತೆ ಕನ್ನಿಂಗ್‌ ಹ್ಯಾಂ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅಪೂರ್ವ ಕಾಸರವಳ್ಳಿ ನಿರ್ದೇಶನದ “ನಿರುತ್ತರ’ ಸಿನಿಮಾ ವೀಕ್ಷಿಸಿದರು. ಈ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಸಚಿವ ಆರ್‌.ರೋಷನ್‌ಬೇಗ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ಇತರರು ಸಹ
ಸಿನಿಮಾ ವೀಕ್ಷಿಸಿದರು.

ಮೈಸೂರಿನಲ್ಲಿ “ಬಾಹುಬಲಿ’ ವೀಕ್ಷಣೆ: “ಬಾಹು ಬಲಿ- 2′ ಸಿನಿಮಾ ಈ ಹಿಂದೆ ತೆರೆಕಂಡಿದ್ದ “ಬಾಹುಬಲಿ’ ಚಿತ್ರದ ಮುಂದುವರಿದ ಭಾಗ ವಾಗಿದೆ. ಮೊದಲ ಚಿತ್ರ ವೀಕ್ಷಿಸಿದರೆ ಮಾತ್ರ ಎರಡನೇ ಚಿತ್ರ ಸುಲಭವಾಗಿ ಅರ್ಥವಾಗುತ್ತದೆ
ಎನ್ನಲಾಗುತ್ತದೆ. ಆದರೆ ಮುಖ್ಯಮಂತ್ರಿಗಳು ಈ ಹಿಂದೆ ದಿ. ಎಚ್‌.ಎಸ್‌.ಮಹದೇವಪ್ರಸಾದ್‌ ಅವರ ಮೈಸೂರು ನಿವಾಸದಲ್ಲಿ “ಬಾಹುಬಲಿ’ ಸಿನಿಮಾ ವೀಕ್ಷಿಸಿದ್ದರು.

ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆ ಸಂದರ್ಭದಲ್ಲಿ ನಿರಂತರವಾಗಿ ಕೆಲವು ದಿನ ಬಿರುಸಿನ ಪ್ರಚಾರ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ “ರಾಜಕುಮಾರ’ ಚಿತ್ರವನ್ನು ವೀಕ್ಷಿಸಿದ್ದರು.

Advertisement

ದುಬಾರಿ ಟಿಕೆಟ್‌
ಸಿದ್ದರಾಮಯ್ಯ ಅವರು ರಾಜ್ಯದ ಮಲ್ಪಿಫ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೆ 200 ರೂ. ದರ ನಿಗದಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದ್ದರು. ಇದರಿಂದ ಸಿನಿಪ್ರಿಯರು ಹಾಗೂ ಕನ್ನಡ ಚಲನಚಿತ್ರ ಕಲಾವಿದರ ಮೆಚ್ಚುಗೆಗೂ ಪಾತ್ರರಾಗಿದ್ದರು. ಆದರೆ ಈ ಭರವಸೆಯಂತೆ ಆದೇಶ ಇನ್ನೂ ಹೊರಬಿದ್ದಿಲ್ಲ. ಹಣಕಾಸು ಇಲಾಖೆ ಅನುಮೋದನೆ ಬಳಿಕ ಅಂತಿಮ ಅಧಿಸೂಚನೆ ಹೊರಬೀಳಬೇಕಿದೆ. ಹಾಗಾಗಿ ಸದ್ಯ ಹಾಲಿ ದುಬಾರಿ ದರವನ್ನೇ ಮಲ್ಟಿಫ್ಲೆಕ್ಸ್‌ಗಳಲ್ಲಿ
ವಿಧಿಸಲಾಗುತ್ತಿದೆ. ಸೋಮವಾರ ಕುಟುಂಬ ಸದಸ್ಯರೊಂದಿಗೆ ಒರಾಯನ್‌ ಮಾಲ್‌ಗೆ ತೆರಳಿದ ಮುಖ್ಯಮಂತ್ರಿಗಳು ಸಾಮಾನ್ಯ ಟಿಕೆಟ್‌ ದರವನ್ನೇ ನೀಡಿ ಚಿತ್ರ ವೀಕ್ಷಿಸಿರುವುದು ಇದೀಗ ಚರ್ಚೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next