ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಪೋನ್ ಕದ್ದಾಲಿಕೆ ಹಗರಣದ ತನಿಖೆಯನ್ನು ರಾಜ್ಯ ಸರಕಾರ ಸಿಬಿಐಗೆ ಒಪ್ಪಿಸಿದ್ದು, ಈ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಾಗತಿಸಿದ್ದಾರೆ.
ಈ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಪೋನ್ ಕದ್ದಾಲಿಕೆ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ನಿರ್ಧಾರ ಸ್ವಾಗತಾರ್ಹ. ಆದರೆ ಬಿಜೆಪಿ ಸಿಬಿಐಯನ್ನು ಕೈಗೊಂಬೆ ಮಾಡಿಕೊಂಡು ರಾಜಕೀಯ ಸೇಡಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿರುವುದನ್ನು ದೇಶ ಕಂಡಿದೆ. ಇಂತಹ ದುಷ್ಟ ಆಲೋಚನೆ ಬಿಜೆಪಿ ನಾಯಕರಿಗಿಲ್ಲ ಎಂದು ನಂಬಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪೋನ್ ಕದ್ದಾಲಿಕೆ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ನಡೆಸಲು ಆದೇಶ ಮಾಡಲಾಗಿದೆ. ನಾಳೆ ಈ ಸಂಬಂಧ ಆದೇಶ ಹೊರಡಿಸ ಲಾಗುವುದು. ಈ ಬಗ್ಗೆ ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರ ಬರಬೇಕು ತಪ್ಪಿತಸ್ಥರ ವಿರುದ್ದ ಕ್ರಮವಾಗಬೇಕು. ಹೀಗಾಗಿ ಪೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಬಿ ಎಸ್ ಯಡಿಯೂರಪ್ಪ ಅವರು ರವಿವಾರ ಬೆಳಿಗ್ಗೆ ಹೇಳಿಕೆ ನೀಡಿದ್ದರು.