Advertisement

ಬಸವಣ್ಣನ ಐಕ್ಯ ಸ್ಥಳ ವೀಕ್ಷಿಸಿದ ಸಿದ್ದರಾಮಯ್ಯ

06:39 AM Jul 01, 2019 | Lakshmi GovindaRaj |

ಕೂಡಲಸಂಗಮ: ಕೃಷ್ಣ, ಮಲಪ್ರಭೆಯ ಸಂಗಮ ಸ್ಥಳದಲ್ಲಿನ ಬಸವಣ್ಣನ ಐಕ್ಯ ಮಂಟಪ ಒಳಭಾಗದ ಶಿಥಿಲಗೊಂಡ ಗೋಡೆ, ಮೇಲ್ಛಾವಣಿ ಹಾಗೂ ಬಸವಣ್ಣ ಐಕ್ಯವಾದ ಲಿಂಗವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ವೀಕ್ಷಿಸಿದರು.

Advertisement

ಐಕ್ಯ ಮಂಟಪ ಸುತ್ತಲಿನ ಗೋಡೆಗಳ ದುರಸ್ತಿ ಕಾರ್ಯ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಐಕ್ಯ ಮಂಟಪದ ವಿಷಯ ತಿಳಿಸಿ ನನ್ನನು ಇಲ್ಲಿ ಕರೆದುಕೊಂಡು ಬಂದಿದ್ದಾರೆ. ಸ್ಟನ್ನಿಂಗ್‌ ಕೆಲಸ ಸೇರಿ ತಜ್ಞರ ವರದಿಯಂತೆ ದುರಸ್ತಿ ಕಾರ್ಯ ನಡೆಯುತ್ತದೆ. ನಾನು ಕೂಡ ಸರ್ಕಾರಕ್ಕೆ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಪತ್ರ ಬರೆಯುವುದಾಗಿ’ ತಿಳಿಸಿದರು.

“ವರ್ಷಕ್ಕೆ 8ರಿಂದ 10 ಲಕ್ಷ ಪ್ರವಾಸಿಗರು, ಭಕ್ತರು ಭೇಟಿ ನೀಡುತ್ತಾರೆ. ಭಕ್ತರ ಹಿತದೃಷ್ಟಿಯಿಂದ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಪ್ರವೇಶ ಸ್ಥಗಿತಗೊಳಿಸಿ ಕಾಮಗಾರಿ ಬಹುಬೇಗನೆ ಪೂರ್ಣಗೊಳಿಸಲು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಬಸವಣ್ಣನ ಐಕ್ಯಮಂಟಪಕ್ಕೆ ಬರುವ ಭಕ್ತರಲ್ಲಿ ಭಯದ ವಾತಾವರಣ ಮೂಡಬಾರದು ಎಂಬ ಉದ್ದೇಶದಿಂದ ದರ್ಶನ ಸ್ಥಗಿತಗೊಳಿಸಲಾಗಿದೆ’ ಎಂದರು.

ಇದೇ ವೇಳೆ ಮೇ 22ರಿಂದ ದುರಸ್ತಿ ಕಾರ್ಯದ ನಿಮಿತ್ತ ಬಸವಣ್ಣನ ಐಕ್ಯ ಮಂಟಪದ ದರ್ಶನವನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಸ್ಥಗಿತಗೊಳಿಸಿದೆ. ಪ್ರವೇಶ ಸ್ಥಗಿತಗೊಂಡು 38 ದಿನ ಕಳೆದರೂ ದುರಸ್ತಿ ಕಾರ್ಯ ಇನ್ನೂ ನಡೆದಿಲ್ಲ. ಕೂಡಲೇ ಕಾಮಗಾರಿ ಕಾರ್ಯ ಆರಂಭ ಮಾಡಬೇಕು ಎಂದು ಬಸವ ಭಕ್ತರು ಒತ್ತಾಯಿಸಿದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ಅಮರೇಗೌಡ ಬಯ್ನಾಪುರ, ಮಾಜಿ ಸಚಿವರಾದ ಉಮಾಶ್ರೀ, ಎಚ್‌.ವೈ.ಮೇಟಿ ಮತ್ತಿತರರು ಉಪಸ್ಥಿತರಿದ್ದರು.

Advertisement

ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಐಕ್ಯ ಮಂಟಪ ದುರಸ್ತಿ ಕಾರ್ಯ ಪರಿಶೀಲಿಸಿ ಯೋಜನೆ ತಯಾರಿಸಿದ್ದಾರೆ. ಅಂದಾಜು 80 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ. ಮಂಡಳಿಯ ವಿಶೇಷಾಧಿಕಾರಿಗಳಿಗೆ ವರದಿ ಸಲ್ಲಿಸಿ ಅನುಮತಿ ಪಡೆದು ಕಾಮಗಾರಿ ಕಾರ್ಯ ಆರಂಭಿಸುತ್ತೇವೆ.
-ರಾಜಶ್ರೀ ಅಗಸರ, ಆಯುಕ್ತೆ, ಕೂಡಲಸಂಗಮ ಅಭಿವೃದ್ಧಿ ಮಂಡಳಿ

ನನ್ನ ಮಕ್ಕಳಿಗೆ ಅಪ್ಪ, ಅವ್ವ ಅನ್ನೋದು ಕಲಿಸಿದ್ದೇನೆ
ಬಾಗಲಕೋಟೆ: “ಕನ್ನಡ ಭಾಷೆ ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ. ಈ ನಿಟ್ಟಿನಲ್ಲಿ ತಂದೆ-ತಾಯಿಯಲ್ಲೂ ಬದ್ಧತೆ ಇರಬೇಕು. ಇಂದಿನ ಪಾಲಕರಿಗೆ ಅಪ್ಪ-ಅವ್ವ ಅಂದರೆ ಖುಷಿ ಬರಲ್ಲ. ಮಮ್ಮಿ-ಡ್ಯಾಡಿ ಅಂದರೆ ಖುಷಿ ಪಡುತ್ತಾರೆ. ಇದು ಕನ್ನಡದ ಬದ್ಧತೆಯಲ್ಲ. ನಾನು ಕನ್ನಡಕ್ಕಾಗಿ ಬದ್ಧತೆ ಇರುವವನು. ಅದಕ್ಕಾಗಿಯೇ ನನ್ನ ಮಕ್ಕಳಿಗೆ ಮೊದಲು ಅವ್ವಾ-ಅಪ್ಪಾ ಎಂದು ಕರೆಯುವುದನ್ನು ಕಲಿಸಿದ್ದೇನೆ’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಕನ್ನಡ ಮಾಧ್ಯಮದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಭಾಷಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

“ಕೇಂದ್ರ ಸರ್ಕಾರ, ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ ಪ್ರಾಂತೀಯ ಭಾಷೆಗಳ ಮೇಲೆ ಹಿಂದಿ ಹೇರಿಕೆಗೆ ಹೊರಟಿದೆ. ಇದನ್ನು ನಾನು ಈಗಾಗಲೇ ವಿರೋಧಿಸಿದ್ದೇನೆ. ರಾಜ್ಯ ಸರ್ಕಾರವೂ ಈ ವಿಷಯದಲ್ಲಿ ಕೇಂದ್ರಕ್ಕೆ ಪತ್ರ ಬರೆಯಬೇಕು. ಪ್ರಾಂತೀಯ ಭಾಷೆಗಳು ಗಟ್ಟಿಯಾಗಿರಬೇಕು. ಆಯಾ ಭಾಷೆ ಉಳಿದು, ಬೆಳೆದಾಗ ಅಲ್ಲಿನ ಜನರ ಬದುಕು, ಸಂಸ್ಕೃತಿ ಉಳಿಯುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಹಿಂದಿ ಹೇರಿಕೆ ಸರಿಯಲ್ಲ. ಇದನ್ನು ನಾವು ಒಪ್ಪುವುದಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next