Advertisement

ಕೋಲಾರದಲ್ಲಿ ಸಿದ್ದುಗೆ ಇಬ್ರಾಹಿಂ ಸವಾಲು?

11:38 PM Jul 04, 2022 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ಯಲ್ಲಿ ಸ್ಪರ್ಧಿಸಲು ಕ್ಷೇತ್ರ ಹುಡುಕಾಟದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರವನ್ನು ಆಯ್ಕೆ ಮಾಡಿಕೊಂಡರೆ ಅವರ ವಿರುದ್ಧ ಜೆಡಿಎಸ್‌ನಿಂದ ಸಿ.ಎಂ.ಇಬ್ರಾಹಿಂ ಅವರನ್ನು ಕಣಕ್ಕಿಳಿಸಲು ಕಾರ್ಯತಂತ್ರ ರೂಪಿಸಲಾಗಿದೆ.

Advertisement

ಬಾದಾಮಿಯಿಂದ ಸ್ಪರ್ಧಿಸದಿರಲು ತೀರ್ಮಾ ನಿಸಿರುವ ಸಿದ್ದರಾಮಯ್ಯ ಅಂತಿಮವಾಗಿ ಹೆಬ್ಟಾಳ ಅಥವಾ ಕೋಲಾರ ಕ್ಷೇತ್ರದತ್ತ ಗಮನ ಹರಿಸಿದ್ದಾರೆ. ಕೋಲಾರದಿಂದ ಸ್ಪರ್ಧಿಸುವಂತೆ ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಪಟ್ಟು ಹಿಡಿದಿದ್ದಾರೆ.

ಕೋಲಾರದಲ್ಲಿ 45 ಸಾವಿರ ಮುಸ್ಲಿಂ ಹಾಗೂ 40 ಸಾವಿರ ಒಕ್ಕಲಿಗ ಸಮುದಾಯದ ಮತಗಳಿ ರುವ ಕಾರಣ ಸಿ.ಎಂ.ಇಬ್ರಾಹಿಂ ಅವರನ್ನು ಕಣಕ್ಕಿಳಿಸುವುದು ಸೂಕ್ತ ಎಂದು ಜೆಡಿಎಸ್‌ ನಿರ್ಧರಿಸಿದೆ. ಒಂದೊಮ್ಮೆ ಸಿದ್ದರಾಮಯ್ಯ ಹಾಗೂ ಇಬ್ರಾಹಿಂ ಮುಖಾಮುಖೀಯಾದರೆ ಅದು ಜಿದ್ದಾಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗಲಿದೆ.

ಮುನಿಯಪ್ಪರಿಗೂ ಗಾಳ?
ಕಾಂಗ್ರೆಸ್‌ ವಿರುದ್ಧ ಮುನಿಸಿ ಕೊಂಡಿರುವ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಸೆಳೆಯಲೂ ಜೆಡಿಎಸ್‌ ಮುಂದಾಗಿದೆ. ವಿಧಾನಸಭೆ ಚುನಾವಣೆ ವೇಳೆ ಅವರಿಂದ ರಾಜ್ಯ ವ್ಯಾಪಿ ಪ್ರವಾಸ ಮಾಡಿಸಿ, ಸಮುದಾಯದ ಮನ ಗೆಲ್ಲಲೂ ಜೆಡಿಎಸ್‌ ಮುಂದಾಗಿದೆ. ಅನಂತರ ಕೋಲಾರ ಲೋಕಸಭೆ ಕ್ಷೇತ್ರದಿಂದ ಅವರಿಗೆ ಟಿಕೆಟ್‌ ನೀಡುವ ಬಗ್ಗೆಯೂ ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಇತ್ತೀಚಿನ ವಿದ್ಯಮಾನಗಳ ಬೆನ್ನಲ್ಲೇ ಎಚ್‌.ಡಿ. ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಸೂಚನೆ ಮೇರೆಗೆ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಮನಿಯಪ್ಪ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

ಕೋಲಾರ ಮತ್ತು ಚಿಕ್ಕಬಳ್ಳಾಪುರ ದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪ್ರಬಲ ಪೈಪೋಟಿ ನೀಡುವ ಬಗ್ಗೆ ಆಂತರಿಕ ಸಮೀಕ್ಷೆ ಯಿಂದ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯರನ್ನು ಕೋಲಾರದಿಂದ ಕಣಕ್ಕಿಳಿಸಲು ರಮೇಶ್‌ ಕುಮಾರ್‌ ತಂತ್ರಗಾರಿಕೆ ರೂಪಿಸಿದ್ದಾರೆ.

ರಾಹುಲ್‌ ಸಮ್ಮುಖದಲ್ಲಿ ಶ್ರೀನಿವಾಸ ಗೌಡ, ಸುಧಾಕರ್‌, ಕೊತ್ತೂರು ಮಂಜುನಾಥ್‌ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡ ಬಳಿಕ ಸಿದ್ದರಾಮಯ್ಯ ಕೋಲಾರಕ್ಕೆ ಬರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಈ ನಡುವೆ ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿದರೆ ಜೆಡಿಎಸ್‌ ಹಾಗೂ ಬಿಜೆಪಿ ಒಂದಾಗ ಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ.

ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಸಂಬಂಧ ಈಗಾಗಲೇ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ನಾಯಕರ ಜತೆ ಚರ್ಚಿಸಿದ್ದು, ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಈ ಮೊದಲು ಸಿದ್ದರಾಮಯ್ಯ ಅವರು ಚಾಮರಾಜಪೇಟೆಯಲ್ಲಿ ಸ್ಪರ್ಧಿಸುವ ಬಗ್ಗೆ ಚಿಂತಿಸಿದ್ದರು. ಆದರೆ ಅಲ್ಲಿಂದ ಸ್ಪರ್ಧಿಸಿದರೆ ಮುಸ್ಲಿಂ ಅಭ್ಯರ್ಥಿಯೊಬ್ಬರ ಅವಕಾಶ ಕಸಿದುಕೊಂಡಂತಾಗುತ್ತದೆ ಎಂಬ ಕಾರಣಕ್ಕೆ ಬೇರೆ ಕ್ಷೇತ್ರವನ್ನು ಹುಡುಕುತ್ತಿದ್ದಾರೆ. ಹೆಬ್ಟಾಳದಿಂದ ಸ್ಪರ್ಧಿಸಲು ಒತ್ತಡ ಇದ್ದರೂ ಸಿದ್ದರಾಮಯ್ಯ ಕೋಲಾರದತ್ತ ಒಲವು ಹೊಂದಿದ್ದಾರೆ ಎನ್ನಲಾಗಿದೆ.

ವರುಣಾದಿಂದ ಬಿ.ವೈ.ವಿಜಯೇಂದ್ರ?
ಶಾಸಕ ಜಿ.ಟಿ. ದೇವೇಗೌಡರು ಕಾಂಗ್ರೆಸ್‌ ಸೇರಿದರೆ ಅವರನ್ನು ವರುಣಾದಿಂದ ಕಣಕ್ಕಿಳಿಸುವ ಬಗ್ಗೆ ಸಿದ್ದರಾಮಯ್ಯ ಒಲವು ಹೊಂದಿದ್ದರು. ಆದರೆ ಜಿ.ಟಿ.ಡಿ. ಇನ್ನೂ ಸ್ಪಷ್ಟ ನಿಲುವು ಕೈಗೊಂಡಿಲ್ಲ. ಜತೆಗೆ ವರುಣಾದಿಂದ ಬಿ.ವೈ.ವಿಜಯೇಂದ್ರ ಸ್ಪರ್ಧೆ ಸಾಧ್ಯತೆ ಇದೆ.

-ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next