ಮೈಸೂರು: ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವುದು ಜನ ಸೇವೆಗಾಗಿ. ಅದರಲ್ಲಿ ಹೊಸದೇನಿದೆ? ಪ್ರಧಾನಮಂತ್ರಿ ಹುದ್ದೆ ಎನ್ನುವುದು ಜನಸೇವೆಗಾಗಿ ಎಂಬುದು ಪ್ರಧಾನಿ ಮೋದಿಯವರಿಗೆ ಈಗ ಜ್ಞಾನೋದಯವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಅಧಿಕಾರ ಅಲ್ಲ ಜನ ಸೇವೆ ಮುಖ್ಯ’ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಟಾಂಗ್ ನೀಡಿದರು. “ರಾಜಕೀಯವೇ ಜನಸೇವೆ- ಅದು ಈಗ ಪ್ರಧಾನಮಂತ್ರಿಗೆ ಅರಿವಾಗಿದೆ” ಎಂದು ವ್ಯಂಗ್ಯವಾಡಿದರು.
ನಿರ್ಲಕ್ಷ್ಯ ಬೇಡ: ಕೋವಿಡ್ ಮೂರನೇ ಅಲೆಯನ್ನು ಸರ್ಕಾರ ನಿರ್ಲಕ್ಷಿಸಬಾರದು. ಎರಡನೇ ಅಲೆಯನ್ನು ನಿರ್ಲಕ್ಷಿಸಿದ ಪರಿಣಾಮ ಅನೇಕ ಸಾವುಗಳು ಉಂಟಾದವು. ಮೂರನೇ ಅಲೆಯ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಅಗತ್ಯ. ರಾಜ್ಯಕ್ಕೂ ಮೂರನೇ ಅಲೆ ಬಾರದಂತೆ ಎಚ್ಚರ ವಹಿಸಬೇಕಾದುದು ಸರ್ಕಾರದ ಕರ್ತವ್ಯ. ಸದ್ಯಕ್ಕೆ ರಾಜ್ಯಕ್ಕೆ ಮೂರನೇ ಅಲೆ ಬಂದಿಲ್ಲ, ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಮತ್ತೆ ಲಾಕ್ ಡೌನ್ ಮಾಡುವ ಯಾವುದೇ ಚಿಂತೆನೆ ಇಲ್ಲ: ಸಚಿವ ಕೆ.ಸುಧಾಕರ್
15 ಸ್ಥಾನಗಳಲ್ಲಿ ಗೆಲುವು: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುತ್ತದೆ. ಜೆಡಿಎಸ್ ಬಿಜೆಪಿಗೆ ಬೆಂಬಲ ಕೊಟ್ಟರೂ ನಮಗೆ ಏನು ತೊಂದರೆ ಆಗುಗುವುದಿಲ್ಲ. ಮೊದಲಿನಿಂದಲೂ ಅವರದ್ದು ಒಳ ಒಪ್ಪಂದ ನಡೆಯುತ್ತಲೇ ಇದೆ. ಅದರಲ್ಲಿ ಹೊಸತೇನು ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.