ಬೆಂಗಳೂರು: ಬಿಜೆಪಿಯವರು ದೇಶಾದ್ಯಂತ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಶೇ.38, ಬಿಜೆಪಿಗೆ ಶೆ.37 ಹಾಗೂ ಜೆಡಿಎಸ್‌ಗೆ ಶೇ.19 ಮತಗಳು ಬಂದಿವೆ. ಎರಡೂ ಪಕ್ಷಗಳ ಮತಗಳು ಹಾಗೂ ಸಂಖ್ಯಾಬಲ ಬಿಜೆಪಿಗಿಂತ ಹೆಚ್ಚಿದೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಕಾರಣಕ್ಕೆ ಅವರಿಗೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ಕಲ್ಪಿಸಿದ್ದರು. ಆದರೆ, ಯಡಿಯೂರಪ್ಪವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ವಿಫಲರಾದರು. ಆ ನಂತರ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಒಂದು ವರ್ಷದಿಂದ ಬಿಜೆಪಿಯವರು ಸರ್ಕಾರವನ್ನು ಅಸ್ಥಿರಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಐದು ಬಾರಿ ಪ್ರಯತ್ನ ವಿಫಲವಾಗಿದ್ದಾರೆ. ಈಗ ಮತ್ತೆ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ರಾಜೀನಾಮೆ ನೀಡಿದವರು ಈಗಲೂ ಸಚಿವರೇ: ಸರ್ಕಾರ ಉಳಿಸಿಕೊಳ್ಳಲು ಈಗಾಗಲೇ ಡಿಸಿಎಂ ಪರಮೇಶ್ವರ್ ಸೇರಿ 21 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅವರೆಲ್ಲರೂ ಈಗಲೂ ಸಚಿವರಾಗಿದ್ದಾರೆಂದು ಸಿದ್ದರಾಮಯ್ಯ ಹೇಳಿದರು. ಸಚಿವರು ಕೆಪಿಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗೆ ಸಲ್ಲಿಸಿಲ್ಲ. ಹೀಗಾಗಿ ಅವರಿನ್ನೂ ಸಚಿವರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಯಾರನ್ನು ಉಳಿಸಿಕೊಳ್ಳಬೇಕು ಯಾರನ್ನು ಬಿಡಬೇಕು ಎಂದು ತೀರ್ಮಾನ ಮಾಡಿ, ಮುಖ್ಯಮಂತ್ರಿಗೆ ಕಳುಹಿಸಿ ಕೊಡುತ್ತಾರೆ ಎಂದರು.
ರಾಮಲಿಂಗಾ ರೆಡ್ಡಿ ಬಗ್ಗೆ ಮೃದು ಧೋರಣೆ: ಪಕ್ಷದ ಹಿರಿಯ ನಾಯಕ ಹಾಗೂ ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಬಗ್ಗೆ ಕಾಂಗ್ರೆಸ್ ನಾಯಕರು ಮೃದು ಧೋರಣೆ ಅನುಸರಿಸಲು ತೀರ್ಮಾನಿಸಿದ್ದಾರೆ. ರಾಜೀನಾಮೆ ನೀಡಿ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದರೂ, ಅವರ ವಿರುದ್ಧ ಸ್ಪೀಕರ್‌ಗೆ ದೂರು ನೀಡಿಲ್ಲ ಎಂದು ತಿಳಿದು ಬಂದಿದೆ. ಅಲ್ಲದೇ ಅವರ ವಿರುದ್ಧ ಕ್ರಮಕ್ಕೆ ಮುಂದಾದರೆ, ಈಗಾಗಲೇ ಮುಂಬೈಗೆ ತೆರಳಿರುವ ಬೆಂಗಳೂರಿನ ಶಾಸಕರನ್ನು ವಾಪಸ್ ಕರೆಸಲು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಅವರ ಮನವೊಲಿಕೆ ಪ್ರಯತ್ನ ನಡೆಸಿ ಪಕ್ಷದಲ್ಲಿ ಉಳಿಸಿಕೊಂಡರೆ, ಬೆಂಗಳೂರಿನ ನಾಲ್ವರು ಶಾಸಕರೂ ವಾಪಸ್ ಬರುತ್ತಾರೆ ಎನ್ನವ ವಿಶ್ವಾಸವನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ.
ಸರ್ಕಾರ ಉಳಿಯುವ ಭರವಸೆ ಕಡಿಮೆ?: ಹೇಗಾದರೂ ಮಾಡಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಎಲ್ಲ ರೀತಿಯ ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ವಿಶ್ವಾಸ ಹೊಂದಿಲ್ಲ. ಈಗಾಗಲೇ ಪಕ್ಷದ 11 ಜನ ಶಾಸಕರು ರಾಜೀನಾಮೆ ನೀಡಿದ್ದು, ಪ್ರತಿ ದಿನ ಇನ್ನಷ್ಟು ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದಿಂದ ಸರ್ಕಾರ ಉಳಿಯುವ ಬಗ್ಗೆ ಕಾಂಗ್ರೆಸ್‌ನ ನಾಯಕರಲ್ಲಿ ಭರವಸೆ ಇಲ್ಲ ಎನ್ನಲಾಗುತ್ತಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಅದೇ ರೀತಿಯ ವಾತಾವರಣ ಕಂಡು ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.