Advertisement
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡೇ ತೀರುತ್ತಾರೆ, ಇದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಘಂಟಾಘೋಷವಾಗಿ ವಾದಿಸುತ್ತಿದ್ದ ನಾಯಕರು ಇದೀಗ ತೆರೆ ಮರೆಗೆ ಸರಿದಿದ್ದಾರೆ. ಎಡವಟ್ಟಾಗಿದ್ದು ಎಲ್ಲಿ ಎಂಬ ಬಗ್ಗೆ ಆಪ್ತ ವಲಯದಲ್ಲಿ ಆಳವಾದ ಚಿಂತನ ಮಂಥನ ನಡೆಸುತ್ತಿದ್ದು, ಬಹಿರಂಗವಾಗಿ ತೋರ್ಪಡಿಸಿ ಕೊಳ್ಳುವ ಉತ್ಸಾಹವಿಲ್ಲದಂತಾಗಿದೆ.
Related Articles
Advertisement
ಸ್ವಾರ್ಥ ರಾಜ ಕಾರಣ: ಸಿದ್ದರಾಮಯ್ಯ ಅಹಿಂದ ಮುಖಂಡರು. ಕೋಲಾರದಲ್ಲಿ ಅಹಿಂದ ಮತಗಳೇ ಶೇ.75 ಕ್ಕಿಂತಲೂ ಹೆಚ್ಚಾಗಿವೆ. ಸಿದ್ದರಾಮಯ್ಯ ನಾಮ ಬಲಕ್ಕೆ ತಾನೇ ತಾನಾಗಿ ಮತಗಳು ಬೀಳುತ್ತವೆ. ಅವರು ಗೆಲ್ಲುವುದು ಖಚಿತ. ಈ ಗೆಲುವಿನ ಕ್ರೆಡಿಟ್ ತಾವೇ ತೆಗೆದುಕೊಳ್ಳಬೇಕು ಎಂಬ ಮುಖಂಡರ ಸ್ವಾರ್ಥವೇ ಅವರ ಪರವಾದ ಅಲೆ ಎಬ್ಬಿಸಲು ಸಾಧ್ಯವಾಗಿರಲಿಲ್ಲ.
ಸಿದ್ದರಾಮಯ್ಯರನ್ನು ಕೋಲಾರಕ್ಕೆ ನಾವೇ ಕರೆ ತಂದೆವು. ನಾವೇ ಗೆಲ್ಲಿಸಿದೆವು. ಅವರು ಮತ್ತೇ ಮುಖ್ಯ ಮಂತ್ರಿಯಾದರೆ ಅದರ ರಾಜಕೀಯ ಲಾಭವನ್ನು ನಾವು ಮಾತ್ರವೇ ಪಡೆದುಕೊಳ್ಳಬೇಕು, ಎಂಬಿತ್ಯಾದಿ ದುರಾಲೋಚನೆ ಯೋಜನೆಗಳನ್ನು ಹಾಕಿಕೊಂಡಿದ್ದವರು, ಮುಖಂಡರನ್ನು, ಮತದಾರರನ್ನು ಸಿದ್ದರಾಮಯ್ಯ ಪರವಾಗಿ ಜೋಡಿಸುವಲ್ಲಿ ಆಸಕ್ತಿ ತೋರಿಸಲಿಲ್ಲ.
ಈ ಮುಖಂಡರಲ್ಲಿ ಎಷ್ಟರ ಮಟ್ಟಿಗೆ ಹಮ್ಮು ಬಂದಿತ್ತೆಂದರೆ ಸಿದ್ದರಾಮಯ್ಯರ ಕಾರ್ಯಕ್ರಮ ಆಗಮನ ನಿರ್ಗಮನ ಕುರಿತಂತೆ ಸಾರ್ವಜನಿಕರಿಗೆ ಇರಲಿ ಕನಿಷ್ಠ ಪತ್ರಕರ್ತರಿಗೂ ಮಾಹಿತಿ ನೀಡುತ್ತಿರಲಿಲ್ಲ. ಸಿದ್ದರಾಮಯ್ಯ ರಾಜ್ಯ ನಾಯಕರು ಅವರು ಬಂದರೆ ಸಾರ್ವಜನಿಕರು ಬರುತ್ತಾರೆ. ಪತ್ರಕರ್ತರೂ ಬಂದೇ ಬರಬೇಕು ಎಂಬ ಧೋರಣೆ ಸಿದ್ದು ಪರವಾದ ಬೆಂಬಲಿಗರಲ್ಲಿ ಕಾಣಿಸುತ್ತಿತ್ತು.
ಇನ್ನಷ್ಟು ಮುಖಂಡರನ್ನು ಸೇರಿಸಿಕೊಂಡರೆ ತಮಗೆ ಸಿಗಬೇಕಾದ ಕ್ರೆಡಿಟ್ಟಿನ ಪಾಲು ಎಲ್ಲಿ ಕಡಿಮೆಯಾಗಿ ಬಿಡುತ್ತದೋ ಎಂಬ ನಿರೀಕ್ಷೆ ಬಹುತೇಕ ನಾಯಕರಲ್ಲಿ ಕಾಣಿಸುತ್ತಿತ್ತು. ಎಲ್ಲವನ್ನು ನಾವೇ ಮಾಡಿ ಬಿಡುತ್ತೇವೆ ಎಂಬ ಧೋರಣೆ ಸಾಮಾನ್ಯ ಮತದಾರರಲ್ಲಿ ಸಿದ್ದು ಪರ ಅಲೆ ಏಳದ್ದಕ್ಕೆ ಕಾರಣವಾಗಿತ್ತು.
ಚುನಾವಣೆಗೆ ಮುನ್ನವೇ ಸ್ವಾರ್ಥ ಪರವಾಗಿರುವ ಮುಖಂಡರು ಇನ್ನು ಸಿದ್ದರಾಮಯ್ಯ ಗೆದ್ದರೆ ನಮ್ಮನ್ನು ಅವರ ಬಳಿಗೆ ಬಿಡುತ್ತಾರೆಯೇ ಎಂದು ಸಾಮಾನ್ಯ ಮತದಾರರು ಯೋಚಿಸಲು ಆರಂಭಿಸಿದರು. ಇದಕ್ಕೆ ತಕ್ಕಂತೆ ವರ್ತೂರು ಪ್ರಕಾಶ್ ತಾನು ನಿಮ್ಮ ಕೈಗೆಟುಕುವ ಶಾಸಕನಾಗಿದ್ದೇ, ಮುಂದೆಯೂ ಇರುತ್ತೇನೆ ಸಿದ್ದರಾಮಯ್ಯ ಗೆದ್ದರೆ ಇದು ಸಾಧ್ಯವೇ ಎಂದು ಪ್ರಚಾರ ಮಾಡಿದ್ದರು. ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ನಾನು ಕೋಲಾರದ ಮಗ ಎಲ್ಲಿಗೆ ಹೋದರೂ ಕೋಲಾರಕ್ಕೆ ಬಂದು ಮನೆಯಲ್ಲಿ ಮಲಗಬೇಕು. ನಿಮ್ಮ ಕೈಗೆ ಸಿಗುವ ನಿಮ್ಮ ಬಳಿಗೆ ಬರುತ್ತೇನೆಂದು ಪ್ರಚಾರ ಮಾಡಿದರು. ಈ ಪ್ರಚಾರ ಸಾಮಾನ್ಯ ಮತದರಾರರಿಗೆ ನಿಜವೂ ಎನಿಸಿತ್ತು.
ದಲಿತರ ಕಡೆಗಣನೆ, ಅಲ್ಪಸಂಖ್ಯಾತರ ಓಲೈಕೆ: ಕೋಲಾರ ಕ್ಷೇತ್ರದಲ್ಲಿ ಶೇ.50ಕ್ಕಿಂತಲೂ ಹೆಚ್ಚು ಮತಗಳು ದಲಿತ ಮತ್ತು ಅಲ್ಪಸಂಖ್ಯಾತರದು. ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ಮತಗಳಿಗಿಂತಲೂ ದಲಿತ, ಅಲ್ಪಸಂಖ್ಯಾತರು ದೊಡ್ಡ ಮಟ್ಟದಲ್ಲಿ ತಮ್ಮ ಪರವಾಗಿ ನಿಲ್ಲುತ್ತಾರೆಂದು ಭಾವಿಸಿದ್ದರು. ಆದರೆ, ಅಲ್ಪಸಂಖ್ಯಾತರನ್ನು ಕೊಂಚ ಓಲೈಸತೊಡಗಿದ ಮುಖಂಡರು ದಲಿತ ಮತದಾರರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದರು.
ಅಲ್ಪಸಂಖ್ಯಾತ ಮತಗಳನ್ನು ಕ್ರೊಢೀಕರಿಸುವ ಜವಾಬ್ದಾರಿಯನ್ನು ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಹೊತ್ತುಕೊಂಡಿದ್ದರು. ಅಲ್ಪಸಂಖ್ಯಾತರ ವಾರ್ಡ್‌ಗಳಲ್ಲಿ, ಗ್ರಾಮಗಳಲ್ಲಿ ಸಂಚರಿಸಿ ಒಂದು ಹಂತದ ಪ್ರಚಾರ ಪೂರ್ಣಗೊಳಿಸಿದ್ದರು. ಮಾನಸಿಕವಾಗಿ ಅಲ್ಪಸಂಖ್ಯಾತರನ್ನು ಸಿದ್ದರಾಮಯ್ಯರ ಪರವಾಗಿ ನಿಲ್ಲುವಂತೆ ಸಜ್ಜುಗೊಳಿಸುವ ಪ್ರಯತ್ನ ಮಾಡಿದ್ದರು. ಆದರೆ, ಸಿದ್ದರಾಮಯ್ಯರನ್ನು ಕೋಲಾರಕ್ಕೆ ಆಹ್ವಾನಿಸಿದ್ದ ಮುಖಂಡರು 75 ಸಾವಿರಕ್ಕಿಂತಲೂ ಅಧಿಕವಾಗಿರುವ ದಲಿತ ಮತದಾರರನ್ನು ನಿರ್ಲಕ್ಷಿಸಿದ್ದರು. ಚುನಾವಣೆ ಹಿಂದಿನ ದಿನ ಹಣ ಕೊಟ್ಟರೆ ದಲಿತರು ಮತ ಚಲಾಯಿಸುತ್ತಾರೆಂಬ ಧೋರಣೆ ಅವರಲ್ಲಿತ್ತು. ಬೂತ್ ಕಮಿಟಿಗಳ ರಚನೆಯಲ್ಲಿಯೂ ದಲಿತರು ನಿರ್ಲಕ್ಷಿಸಲ್ಪಟ್ಟಿದ್ದರು.
ಯಾವುದಕ್ಕೂ ಪ್ರತಿಕ್ರಿಯಿಸದ ಮುಖಂಡರು: ಇದೇ ಕಾರಣದಿಂದ ದಲಿತ ಮುಖಂಡರನ್ನು ವಿರೋಧಿಗಳು ಬುಟ್ಟಿಗೆ ಹಾಕಿಕೊಂಡರು. ಅವರಿಂದ ಸಿದ್ದು ದಲಿತ ವಿರೋಧಿ ಹೇಳಿಕೆ ಕೊಡಿಸಿದರು. ಕರಪತ್ರಗಳನ್ನು ಹಂಚಿಸಿದರು. ಸಿದ್ದರಾಮಯ್ಯ ವಿರುದ್ಧ ಸಮಾವೇಶಗಳನ್ನು ಆಯೋಜಿಸಿದರು. ಆದರೆ, ಇದ್ಯಾವುದಕ್ಕೂ ಸಿದ್ದರಾಮಯ್ಯ ಬಣದ ಕೋಲಾರ ಮುಖಂಡರು ಕಿಂಚಿತ್ತೂ ಪ್ರತಿಕ್ರಿಯಿಸಿರಲಿಲ್ಲ. ದಲಿತ ಮುಖಂಡರು ಪ್ರಜ್ಞಾವಂತ ದಲಿತರ ಒಕ್ಕೂಟದಲ್ಲಿ ಸಭೆಗಳನ್ನು ಮಾಡಿ ಕಾಂಗ್ರೆಸ್ ನಾಯಕರ ಎಚ್ಚರಿಸುವ ಕೆಲಸ ಮಾಡಿದ್ದರು. ಸಿ
ದ್ದರಾಮಯ್ಯ ನಾಮ ಬಲದಿಂದಲೇ ಗೆದ್ದು ಬಿಡುತ್ತೇವೆಂದು ಬೀಗುತ್ತಿದ್ದವರು ಇವರತ್ತ ಕಣ್ಣೆತ್ತಿಯೂ ನೋಡಲಿಲ್ಲ. ಕೊನೆಗೆ ದಲಿತ ಮುಖಂಡರು ಪ್ರಜ್ಞಾವಂತ ದಲಿತ ಮುಖಂಡರ ಒಕ್ಕೂಟ ರಚಿಸಿಕೊಂಡು ಅನಾಯಾಸವಾಗಿ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಪರ ನಿಂತು ಬಿಟ್ಟರು. ನಿರ್ಲಕ್ಷಿಸಿದ ಕಿಡಿ ಊರನ್ನೇ ಆಹುತಿ ತೆಗೆದುಕೊಂಡಿತು ಎಂಬಂತೆ ಸಿದ್ದರಾಮಯ್ಯ ಬಣದ ಮುಖಂಡರು ದಲಿತ ಹಿಂದುಳಿದವರನು ಕಡೆಗಣಿ ಸಿದ್ದು, ತಿದ್ದಿಕೊಳ್ಳಲಾಗದ ತಪ್ಪಾಗಿ ಪರಿಣಮಿಸಿಬಿಟ್ಟಿತ್ತು.
ಸಮೀಕ್ಷೆಗಳ ಮೇಲೆ ಪ್ರಭಾವ: ಸಿದ್ದರಾಮಯ್ಯರನ್ನು ಕೋಲಾರಕ್ಕೆ ಆಹ್ವಾನಿಸಿದ್ದವರು ತಮ್ಮದೇ ಭ್ರಮಾಲೋಕ ದಲ್ಲಿ ತೇಲಾಡುತ್ತಿದ್ದ ಪರಿಣಾಮದಿಂದ ನವೆಂಬರ್ 23 ರಿಂದ ಮಾರ್ಚ್ 23 ರವರೆವಿಗೂ ನಡೆದ ಬಹುತೇಕ ಸಮೀಕ್ಷೆಗಳಲ್ಲಿ ಸಿದ್ದರಾಮಯ್ಯರಿಗೆ ಪ್ರತಿಕೂಲವಾದ ವರದಿಗಳೇ ಬರುವಂತಾಯಿತು. ಈ ವರದಿಗಳ ಆಧಾರದ ಮೇಲೆಯೇ ಪಕ್ಷದ ಹೈಕ ಮಾಂಡ್ ಸಿದ್ದರಾಮಯ್ಯರಿಗೆ ಸುರಕ್ಷಿತವಲ್ಲ ಎಂಬ ನಿರ್ಧಾರಕ್ಕೆ ಕಾರಣ. ಇದು ಕೋಲಾರದಿಂದ ಸಿದ್ದರಾಮಯ್ಯರನ್ನು ದೂರವಾಗಿಸಿತ್ತು, ವರುಣಾಗೆ ಹತ್ತಿರವಾಗಿಸಿತ್ತು.
ಮತ್ತೂ ನಿರೀಕ್ಷೆ: ಇದೀಗ ಸಿದ್ದರಾಮಯ್ಯರನ್ನು ಆಹ್ವಾ ನಿ ಸಿದ ಕಾಂಗ್ರೆಸ್ ಬಣದಲ್ಲಿ ನೀರವ ಮೌನ ಆವರಿಸಿದೆ. ಆದರೂ, ಸಿದ್ದರಾಮಯ್ಯ ವರುಣಾ ಜೊತೆಗೆ ಕೋಲಾರದಿಂದಲೂ ಸ್ಪರ್ಧಿಸುತ್ತಾರೆಂಬ ವದಂತಿಗಳ ಆಧಾರದ ಮೇಲೆ ಮುಂದಿನ ರಾಜಕೀಯ ಹೆಜ್ಜೆ ಇಡಲು ತೀರ್ಮಾನಿಸಿದಂತೆ ಸದ್ಯಕ್ಕೆ ತಟಸ್ಥರಾಗಿದ್ದಾರೆ.
ಸಿದ್ದರಾಮಯ್ಯ ಪರವಾಗಿ ದೊಡ್ಡ ಮಟ್ಟದ ಅಲೆ ಎಬ್ಬಿಸುವಲ್ಲಿ ಕಾಂಗ್ರೆಸ್ ಮುಖಂಡರು ಸಂಪೂರ್ಣ ವಿಫಲರಾಗಿದ್ದರು. ಸಿದ್ದರಾಮಯ್ಯ ವರುಣಾ ಮತ್ತು ಕೋಲಾರದಿಂದ ಸ್ಪರ್ಧಿಸುತ್ತಾರೆಂಬ ವದಂತಿ ಇದೆ. ಇದು ನಿಜವಾದರೆ, ಮುಖಂಡರು ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಎಲ್ಲಾ ಜಾತಿ ವರ್ಗಗಳನ್ನು ಕ್ರೊಢೀಕರಿಸಿಕೊಂಡು ಸಿದ್ದರಾಮಯ್ಯರ ಪರ ಅಲೆ ಎಬ್ಬಿಸುತ್ತಾರೆಂಬ ಆಶಾಭಾವನೆ ಇದೆ. ● ವಿಜಯಕುಮಾರ್, ಸಿದ್ದರಾಮಯ್ಯ ಅಭಿಮಾನಿ
– ಕೆ.ಎಸ್.ಗಣೇಶ್