Advertisement

ಅನುಕಂಪ ಗಿಟ್ಟಿಸುವ ಹಾದಿ ಹಿಡಿದರೇ ಸಿದ್ದರಾಮಯ್ಯ?

11:25 PM Nov 15, 2022 | Team Udayavani |

ಮಾಜಿ ಸಿಎಂ ಸಿದ್ದರಾಮಯ್ಯ ಇಷ್ಟು ದಿನಗಳ ತಮ್ಮ ರಾಜಕೀಯ ಜೀವನದಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮ ಆಯಸ್ಸಿನ ಬಗ್ಗೆ ಮಾತಾಡಿರಲಿಲ್ಲ. ಆದರೆ ಸೋಮವಾರ ಮೈಸೂರಿನಲ್ಲಿ ಖಾಸಗಿ ಆಸ್ಪತ್ರೆಯೊಂದನ್ನು ಉದ್ಘಾಟಿಸಿ ಮಾತನಾಡುತ್ತ, ಅವರು ಆಡಿರುವ ಮಾತುಗಳು ಅಚ್ಚರಿ ಮೂಡಿಸಿವೆ.

Advertisement

ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ, ಜನಸೇವೆ ಮಾಡಲು ನಾನಿನ್ನೂ ಹೆಚ್ಚು ವರ್ಷ ಬದುಕಬೇಕು. ಇನ್ನೆಷ್ಟು ವರ್ಷ ಬದುಕಿರುತ್ತೇನೆಯೋ ಗೊತ್ತಿಲ್ಲ. ಡಯಾಬಿಟಿಸ್‌ ಬಂದು 10 ವರ್ಷ ಆಯಸ್ಸು ಕುಗ್ಗಿದೆ. ಆದರೂ 76 ವರ್ಷಬದುಕಿದ್ದೇನೆ ಎಂಬ ಮಾತುಗಳನ್ನು ಸಿದ್ದರಾಮಯ್ಯ ಆಡಿದ್ದಾರೆ.

ಕಳೆದ ಎರಡು ಮೂರು ವಿಧಾನಸಭಾ ಚುನಾವಣೆಗಳಿಂದ ಸಿದ್ದರಾಮಯ್ಯ ಅವರು ಇದೇ ತಮ್ಮ ಕೊನೆಯ ಚುನಾವಣೆ ಎಂದಿದ್ದಾರೆ. ಆದರೆ  ಮತ್ತೆ ಅವರು ಚುನಾವಣ ಅಖಾಡಕ್ಕೆ ಇಳಿದಿದ್ದಾರೆ. ಈ ಬಾರಿಯೂ ಚುನಾವಣ ಪ್ರಚಾರದಲ್ಲಿ ಇಂತಹ ಮಾತನ್ನು ಅವರು ಆಡಬಹುದು. ಆದರೆ ಈ ಬಾರಿ ಅವರು ತಮ್ಮ ಆರೋಗ್ಯ, ಆಯಸ್ಸಿನ ಬಗ್ಗೆ ಪ್ರಸ್ತಾವಿಸುತ್ತಾ ಅನುಕಂಪದ ಹಾದಿ ಹಿಡಿದರೇ? ಜೆಡಿಎಸ್‌ ನಾಯಕ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರಂತೆ ಬಹಿರಂಗ ಸಭೆಗಳಲ್ಲಿ ಅನುಕಂಪ ಗಿಟ್ಟಿಸುವ ಮಾತುಗಳಿಗೆ ಮೊರೆ ಹೋದರೆ ಎಂಬ ಪ್ರಶ್ನೆ ಮೂಡಿದೆ. ಸಿದ್ದರಾಮಯ್ಯ ಅವರು ಯಾವತ್ತೂ ವೈಯಕ್ತಿಕ ನೋವುಗಳನ್ನು ಹೇಳಿಕೊಂಡು ಓಟು ಕೇಳುವ ಜಾಯಮಾನದವರಲ್ಲ.  ಬಳ್ಳಾರಿಯ ರೆಡ್ಡಿ ಸಹೋದರರ ಅಕ್ರಮ ವಿರುದ್ಧವೂ ಅವರು ವಿಧಾನಸಭೆಯಲ್ಲಿ ತೊಡೆತಟ್ಟಿ ಬಳ್ಳಾರಿಗೆ ಪಾದಯಾತ್ರೆಯಲ್ಲೇ ಹೊರಟವರು. ಅಂತಹ ಸಿದ್ದರಾಮಯ್ಯ ಅವರು ಚುನಾವಣೆ ಹೊಸ್ತಿಲಲ್ಲಿರುವಾಗ ಈ ಬಗ್ಗೆ ಮಾತಾಡಿರುವುದು ಅಚ್ಚರಿ ತಂದಿದೆ. ಈ ಬಾರಿ ಇಂಥ ಭಾವನಾತ್ಮಕ ಹಾಗೂ ಅನುಕಂಪದ ಅಸ್ತ್ರ ಮಾತ್ರ ತಮ್ಮ ಕೈ ಹಿಡಿಯಬಹುದು ಎಂದು ಸಿದ್ದರಾಮಯ್ಯ ಅವರಿಗೆ ಅನ್ನಿಸಿದೆಯೇ?

ಸದ್ಯ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯ, ಕೋಲಾರಕ್ಕೂ ಹೋಗಿ ಪಿಚ್‌ ಪರಿಶೀಲನೆ ಮಾಡಿ ಬಂದಿದ್ದಾರೆ. ಇನ್ನೊಂದೆಡೆ ವರುಣಾ ಕ್ಷೇತ್ರದಲ್ಲೂ ಸ್ಪರ್ಧಿಸಬಹುದು ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. “ನೀವು ಮತ ಹಾಕಿದರೆ, ನಾನು ಮುಖ್ಯಮಂತ್ರಿಯಾಗುತ್ತೇನೆ’ ಎಂಬರ್ಥದ ಮಾತನ್ನಾಡಿದ್ದಾರೆ. ಈ ಮೂಲಕ ತಾವು ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವುದನ್ನು ನೇರವಾಗಿ ಹೇಳಿಕೊಂಡಿದ್ದಾರೆ.

ಈ ಹಂತದಲ್ಲಿ ಸಿದ್ದರಾಮಯ್ಯ ಅವರಿಂದ ಬಂದ “ಆಯಸ್ಸು, ಆರೋಗ್ಯ’ದ ಮಾತುಗಳನ್ನು ಯಾವ ರೀತಿ ಅಥೆìçಸಿಕೊಳ್ಳಬೇಕು? ಮುಖ್ಯಮಂತ್ರಿಯಾಗಲು ಇದೊಂದು ಕೊನೆಯ ಅವಕಾಶ ಎಂಬ ಸಂದೇಶ ನೀಡಲು ಹೊರಟಿದ್ದಾರೆಯೇ?

Advertisement

-ಕೂಡ್ಲಿ ಗುರುರಾಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next