ಬೆಂಗಳೂರು: ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಪ್ರಮಾಣ ಏಕಾಏಕಿ ಸೀಮಿತಗೊಳಿಸಿದ್ದರಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಕಳೆದ ಬಾರಿ ರಾಗಿಗೆ ಉತ್ತಮ ಬೆಲೆ ಬಂದಿದ್ದರಿಂದ ರಾಜ್ಯದಲ್ಲಿ ರೈತರು 15 ಲಕ್ಷ ಮೆಟ್ರಿಕ್ ಟನ್ ರಾಗಿ ಬೆಳೆದಿದ್ದಾರೆ. ಈ ಪೈಕಿ ಕೇವಲ 2.10 ಲಕ್ಷ ಮೆಟ್ರಿಕ್ ಟನ್ ಖರೀದಿಸುವುದಾಗಿ ಸರ್ಕಾರ ಹೇಳಿದೆ. ಮೆಕ್ಕೆಜೋಳ, ತೊಗರಿ, ಭತ್ತ ಮತ್ತಿತರ ಬೆಳೆಗಳಲ್ಲೂ ಇದೇ ಸ್ಥಿತಿ ಇದೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
15 ಲಕ್ಷ ಮೆ.ಟ.ನಲ್ಲಿ ಕೊನೆಪಕ್ಷ ಅರ್ಧದಷ್ಟಾದರೂ ಖರೀದಿಸುವಂತೆ ರೈತರು ಕೇಳುತ್ತಿದ್ದಾರೆ. ಆದರೆ, ಇದರಲ್ಲಿ ಈವರೆಗೆ 1.9 ಲಕ್ಷ ಮೆ.ಟ. ಮಾತ್ರ ಖರೀದಿಸಿದೆ. ಬೆಂಬಲ ಬೆಲೆ ಅಡಿ ರಾಗಿ ಕ್ವಿಂಟಾಲ್‌ಗೆ 3,377 ರೂ. ಬೆಂಬಲ ಬೆಲೆ ಇದ್ದರೆ, ಮಾರುಕಟ್ಟೆಯಲ್ಲಿ 1,800ರಿಂದ 1,900 ರೂ. ಇದೆ. ಆದ್ದರಿಂದ ಸರ್ಕಾರವು ಬೆಂಬಲ ಬೆಲೆ ಅಡಿ ಖರೀದಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಒಂದೆಡೆ ರೈತರ ಉದ್ಧಾರವೇ ತಮ್ಮ ಧ್ಯೇಯ ಅಂತ ಸರ್ಕಾರ ಹೇಳುತ್ತದೆ. ಮತ್ತೂಂದೆಡೆ ರೈತರನ್ನು ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕೂಡಲೇ ಸರ್ಕಾರ ಬೆಂಬಲ ಬೆಲೆ ಅಡಿ ಗರಿಷ್ಠ ಪ್ರಮಾಣದಲ್ಲಿ ಆಹಾರಧಾನ್ಯ ಖರೀದಿಸಬೇಕು. ಆ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.