ಬೆಂಗಳೂರು: ಡ್ರಗ್ಸ್ ಹಗರಣದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಪ್ರಮುಖ ಆರೋಪಿಗಳನ್ನು ಬಂಧಿಸಿದಂತೆ ಸರ್ಕಾರ ಒತ್ತಡ ಹೇರುತ್ತಿದೆ. ಆದ್ದರಿಂದ ಇಡೀ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದು ಸೂಕ್ತ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ನೋಟು ಅಮಾನ್ಯ, ಅವೈಜ್ಞಾನಿಕ ಜಿ.ಎಸ್.ಟಿ ಹಾಗೂ ಕೆಟ್ಟ ಹಣಕಾಸು ನೀತಿಯಿಂದಾಗಿ ದೇಶ ಆರ್ಥಿಕವಾಗಿ ಭಾರಿ ಕೆಳಮಟ್ಟಕ್ಕೆ ಹೋಗಿದೆ. ಜಿಡಿಪಿಯೂ ಭಾರಿ ಕುಸಿತ ಕಂಡಿದೆ. ಇದರಿಂದ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ದೇಶದ ಸಂಪತ್ತು ಬೆಳವಣಿಗೆಯಾದಾಗ ಮಾತ್ರ ಉದ್ಯೋಗ ದೊರೆಯಲು ಸಾಧ್ಯ. ಕೃಷಿ ವಲಯ ಹೊರತುಪಡಿಸಿ ಬೇರೆ ಎಲ್ಲ ಕ್ಷೇತ್ರಗಳ ಬೆಳವಣಿಗೆ ನಕಾರಾತ್ಮಕವಾಗಿದೆ ಎಂದರು.
ಹೊಸದಾಗಿ ಉದ್ಯೋಗ ಕೊಡುವುದಿರಲಿ, ಇರುವ ಉದ್ಯೋಗಗಳೂ ಕಡಿತವಾಗುತ್ತಿವೆ. ಸೂಕ್ಷ್ಮ,ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮುಚ್ಚಿವೆ. ನಿರುದ್ಯೋಗ ಪ್ರಮಾಣ ಭಾರಿ ಎತ್ತರಕ್ಕೆ ಹೋಗಿದೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಪ್ರಧಾನಿಯವರು ನೀಡಿದ್ದ ಭರವಸೆ ಹುಸಿಯಾಗಿದೆ. ಸ್ವಾಮಿನಾಥನ್ ವರದಿ ಜಾರಿಯಾಗದ ಪರಿಣಾಮ ರೈತರೂ ಕಷ್ಟಕ್ಕೆ ಸಿಲುಕಿದ್ದಾರೆ. ನಿರುದ್ಯೋಗದ ಪರಿಣಾಮ ಯುವಕರು ಜೀವನವೇ ಬೇಡ ಎನ್ನುವ ಹಂತ ತಲುಪಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು: ಕಾಂಗ್ರೆಸ್ ವಿರುದ್ಧ ಸಚಿವ ಸಿ.ಟಿ.ರವಿ ವಾಗ್ದಾಳಿ
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗ 51 ಲಕ್ಷ ಮೀರಿದೆ. ಸೋಂಕಿನಲ್ಲಿ ಭಾರತ ಜಗತ್ತಿನಲ್ಲೇ ಎರಡನೇ ಸ್ಥಾನಕ್ಕೆ ಬಂದಿದೆ. ಇದು ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ ಎಂದರು.
ಡ್ರಗ್ಸ್ ಹಗರಣದಲ್ಲಿ ಪ್ರಮುಖ ಆರೋಪಿಗಳನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ. ಸರ್ಕಾರದ ಒತ್ತಡವೂ ಇದಕ್ಕೆ ಕಾರಣ ಇರಬಹುದು. ಅದನ್ನು ನಾನು ಅಲ್ಲಗಳೆಯುವುದಿಲ್ಲ. ಪೊಲೀಸರು ಈ ವಿಷಯದಲ್ಲಿ ಸರ್ಕಾರದ ಕೈಗೊಂಬೆ ಗಳಾಗಿದ್ದಾರೆ. ಸರ್ಕಾರ ಹೇಳಿದಂತೆ ಕೇಳುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಬಿಜೆಪಿಯವರು ಎಲ್ಲದಕ್ಕೂ ಸಿಬಿಐ ತನಿಖೆಗೆ ಆಗ್ರಹ ಮಾಡುತ್ತಿದ್ದರು ಎಂದು ಸಿದ್ದರಾಮಯ್ಯ ಆರೋಪಿಸಿದರು.