Advertisement

ಶಿಕ್ಷಣ ಸಚಿವ ಕಾರ್ಯವೈಖರಿ ವಿರುದ್ಧ ಸಿದ್ದು ವಾಗ್ಧಾಳಿ

08:11 PM Nov 03, 2022 | Team Udayavani |

ಬೆಂಗಳೂರು: ಶಾಲಾ ಮಕ್ಕಳಿಗೆ ಯೋಗ-ಧ್ಯಾನದ ಸುತ್ತೋಲೆ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ವಾಗ್ಧಾಳಿ ನಡೆಸಿದ್ದಾರೆ.

Advertisement

ಸರಣಿ ಟ್ವಿಟ್‌ ಮಾಡಿರುವ ಅವರು, ಬಿ.ಸಿ.ನಾಗೇಶ್‌ ಅವರು  ಶಿಕ್ಷಣ ಸಚಿವರಾದ ದಿನದಿಂದ ಪಠ್ಯಪುಸ್ತಕ ವಿವಾದದಿಂದ ಹಿಡಿದು ಶಾಲಾ ಶಿಕ್ಷಕರ ನೇಮಕದವರೆಗೆ ಬರೀ ಹಗರಣಗಳಲ್ಲೇ ಈಜಾಡುತ್ತಿದ್ದಾರೆ. ಅವರ ಮನಸ್ಸು ಸ್ಥಿಮಿತದಲ್ಲಿದ್ದ ಹಾಗಿಲ್ಲ, ನಿಜವಾಗಿ ಯೋಗ ಮತ್ತು ಧ್ಯಾನದ ಅಗತ್ಯ ಎಲ್ಲರಿಗಿಂತ ಹೆಚ್ಚಾಗಿ ಶಿಕ್ಷಣ ಸಚಿವರಿಗಿದೆ ಎಂದು ಕುಟುಕಿದ್ದಾರೆ.

ಎಳೆಯ ಮಕ್ಕಳು ಆಡುತ್ತಾ, ಕುಣಿಯುತ್ತಾ ಪಾಠ ಓದಬೇಕು. ಇದರ ಬದಲಿಗೆ ಅವರನ್ನು ಕೋಣೆಯಲ್ಲಿ ಕೂಡಿ ಹಾಕಿ ಬಲಾತ್ಕಾರವಾಗಿ ಯೋಗ-ಧ್ಯಾನಗಳ ಕಸರತ್ತು ಮಾಡಿಸಿದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅವರು ಇನ್ನಷ್ಟು ಕುಗ್ಗಿಹೋಗುತ್ತಾರೆಂದು ಟೀಕಿಸಿದ್ದಾರೆ.

ಮೊದಲು ಶಾಲೆಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಶಿಕ್ಷಕರನ್ನು ನೇಮಿಸಿ ಅವಶ್ಯಕವಾದ ಬೋಧನಾ ಸಲಕರಣೆಗಳನ್ನು ಬಿಜೆಪಿ ಫಾರ್‌ ಕರ್ನಾಟಕ ಸರ್ಕಾರ ಒದಗಿಸಬೇಕು. ಪ್ರತಿ ಶಾಲೆಯಲ್ಲಿ ಕಲೆ, ಸಂಗೀತ ಮತ್ತು ಕ್ರೀಡೆಗಳಲ್ಲಿ ತರಬೇತಿ ನೀಡುವ ಶಿಕ್ಷಕರನ್ನು ನೇಮಿಸಬೇಕು. ಇದನ್ನು ಬಿಟ್ಟು ತಮ್ಮ ರಾಜಕೀಯ ಅಜೆಂಡಾಕ್ಕಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು ಎಂದು ಸಲಹೆ ನೀಡಿದ್ದಾರೆ.

ಯೋಗ-ಧ್ಯಾನ ಯಾವುದಕ್ಕೂ ನನ್ನ ವಿರೋಧ ಇಲ್ಲ. ಆದರೆ ಶಾಲೆಗಳಲ್ಲಿ ಯಾವುದು ಮುಖ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಯಾವುದಕ್ಕೆ ಆದ್ಯತೆ ನೀಡಬೇಕೆನ್ನುವುದಷ್ಟೇ  ನನ್ನ ಪ್ರಶ್ನೆ. ಒಂದೆಡೆ ಶಾಲೆ ನಡೆಸಲು ಸಾರ್ವಜನಿಕರಿಂದ ಭಿಕ್ಷೆ ಬೇಡುತ್ತಿರುವ ಬಿಜೆಪಿ ಫಾರ್‌ ಕರ್ನಾಟಕ  ಸರ್ಕಾರ ಇನ್ನೊಂದೆಡೆ ದಿನಕ್ಕೊಂದರಂತೆ ಗಿಮಿಕ್‌ ಗಳನ್ನು ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.

Advertisement

ಕೊರೊನಾವನ್ನು ಸರಿಯಾಗಿ ನಿಯಂತ್ರಿಸಲಾಗದೆ ಶಾಲೆಗಳನ್ನು ಮುಚ್ಚಿ, ಆನ್‌ ಲೈನ್‌ ತರಗತಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮೊಬೈಲ್‌ ಹುಚ್ಚು ಹತ್ತಿಸಿರುವ ಬಿಜೆಪಿ ಫಾರ್‌ ಕರ್ನಾಟಕ ಸರ್ಕಾರ  ಈಗ ಆ ಹುಚ್ಚು ಬಿಡಿಸಲು ಧ್ಯಾನ ನಡೆಸಲು ಮುಂದಾಗಿರುವುದು ಹುಚ್ಚುತನವಲ್ಲದೆ ಮತ್ತೇನು ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next