ಬೆಂಗಳೂರು: ಸರ್ಕಾರ ಚುನಾವಣೆ ಮಾಡಿದ್ದರಿಂದ ನಾವು ಹೋಗಬೇಕಾಯ್ತು. ಇಲ್ಲವಾದರೆ ನಾನು ಯಾಕೆ ಹೋಗುತ್ತಿದ್ದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗಳನ್ನು ಆಯೋಗ ಮುಂದೆ ಹಾಕಬೇಕಿತ್ತು. ಈ ಐದು ರಾಜ್ಯಗಳ ಚುನಾವಣೆಯ ಅಗತ್ಯ ಏನಿತ್ತು? ಪ್ರಧಾನಿ ಜನಸಾಗರ ನೋಡಿ ಖುಷಿ ಪಟ್ಟು ಜನರ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ ಎಂದರು.
ಪ್ರಧಾನಿಗಳು ಒಂದು ರ್ಯಾಲಿಯಲ್ಲಿ ಇಂತಹ ದೊಡ್ಡ ಜನಸಾಗರ ನಾನು ಎಲ್ಲೂ ನೋಡಿಲ್ಲ ಎಂದರು. ರೋಗ ತಡೆಗಟ್ಟುವುದಕ್ಕಿಂತ ರ್ಯಾಲಿ ಮಾಡುವುದು ಮುಖ್ಯವಾಗಿತ್ತು, ಮದ್ರಾಸ್ ಹೈಕೋರ್ಟ್ ಈಗ ಇದಕ್ಕೆ ಚುನಾವಣಾ ಆಯೋಗವೇ ಹೊಣೆಯೆಂದು ಹೇಳಿದೆ. ಆಯೋಗದ ಮೇಲೆ ಕೊಲೆ ಪ್ರಕರಣ ಯಾಕೆ ಹಾಕಬಾರದೆಂದು ಕೇಳಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ:ಪಂಚರಾಜ್ಯ ಚುನಾವಣೆ : ಚುನಾವಣಾ ಫಲಿತಾಂಶದ ಸಂಭ್ರಮಾಚರಣೆಗೆ EC ನಿಷೇಧ
ಸೋಂಕು ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಡವಿದೆ. ಸರ್ಕಾರಕ್ಕೆ ತಜ್ಙರು ಸಲಹೆ ನೀಡುತ್ತಲೇ ಇರುತ್ತಾರೆ. ಮೊದಲ ಅಲೆ ಮುಗಿದ ಬಳಿಕ ಗಂಭೀರ ಕ್ರಮಗಳನ್ನು ಸರ್ಕಾರ ಕೈ ಬಿಟ್ಟಿತು. ಜನವರಿಯಲ್ಲಿ ಎರಡನೇ ಅಲೆ ಪ್ರಾರಂಭವಾಗಬಹುದೆಂದು ನವೆಂಬರ್ 30 2020 ರಲ್ಲಿ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ ಇವರು ಯಾರೂ ವರದಿಯನ್ನ ಗಂಭೀರವಾಗಿ ಪರಿಗಣಿಸಲೇ ಇಲ್ಲ ಆಕ್ಸಿಜನ್, ವೆಂಟಿಲೇಟರ್, ವ್ಯಾಕ್ಸಿನ್ ತಯಾರಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತೀವ್ರತೆ ಬಗ್ಗೆ ಮೊದಲೇ ಹೇಳಿದ್ರೂ ಸಿದ್ದತೆ ಮಾಡಿಕೊಂಡಿಲ್ಲ ಎಂದು ಆರೋಪಿಸಿದರು.
ಡಾ ದೇವಿ ಶೆಟ್ಟಿಯವರು ದಿನಕ್ಕೆ 3 ಲಕ್ಷ ಅಲ್ಲ 15 ಲಕ್ಷ ಕೇಸ್ ಬರುತ್ತಿದೆ. ಟೆಸ್ಟ್ ಮಾಡದೆ ಇರುವುದಕ್ಕೆ ಕಡಿಮೆ ಬರುತ್ತಿದೆ ಎಂದಿದ್ದಾರೆ. ಆರೋಗ್ಯ ಸಚಿವರಿಗೆ ತಜ್ಙರು ಮಾಹಿತಿ ನೀಡುತ್ತಿರುತ್ತಾರೆ. ಆದರೆ ಆರೋಗ್ಯ ಸಚಿವರ ಮಾತನ್ನ ಸಿಎಂ ಕೇಳಿಲ್ಲ. ನಿನ್ನೆಯ ಚರ್ಚೆಯಲ್ಲಿ ಕೂಡಾ ಸಿಎಂ ಇದ್ಯಾವುದರ ಬಗ್ಗೆ ಒಪ್ಪಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.