ಹುಬ್ಬಳ್ಳಿ: ಸರಕಾರದ ನಿರ್ಲಕ್ಷದಿಂದಾಗಿ ದೇಶದಲ್ಲಿ 50 ಲಕ್ಷ ಜನರು ಕೋವಿಡ್ ದಿಂದಾಗಿ ಮೃತಪಟ್ಟಿದ್ದಾರೆ. ಆದರೆ ಯಾವ ಪುರುಷಾರ್ಥಕ್ಕೆ 100 ಕೋಟಿ ಲಸಿಕೆ ಸಾಧನೆ ಮಾಡುತ್ತಿದ್ದಾರೆ. ದೇಶದಲ್ಲಿ ಇಲ್ಲಿಯವರೆಗೆ 29 ಕೋಟಿ ಜನರಿಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಕ್ತ ಚಿಕಿತ್ಸೆ, ಆಕ್ಸಿಜನ್, ವೆಂಟಿಲೇಟರ್, ಔಷಧಿ ನೀಡದೆ 50 ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಸರಕಾರ ಕಾರಣವಾಯಿತು. ಎರಡು ಡೋಸ್ ಲಸಿಕೆ ನೀಡಿರುವುದು ಕೇವಲ 29 ಕೋಟಿ ಜನರಿಗೆ ಮಾತ್ರ. ಅದ್ಯಾವ ಸಾಧನೆಗೆ 100 ಕೋಟಿ ಲಸಿಕೆ ನೀಡಿದ್ದೇವೆ ಎಂದು ಸಂಭ್ರಮಿಸುತ್ತಿದ್ದಾರೆ ಎಂಬುವುದು ಜನರಿಗೆ ಅರ್ಥವಾಗುತ್ತಿಲ್ಲ. ಇಂತಹ ಸುಳ್ಳು ಕಾರ್ಯಕ್ರಮ, ಭರವಸೆಗಳ ಮೂಲಕ ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಬಿಜೆಪಿಯಲ್ಲಿ ಮುಸ್ಲಿಂ ಸಮಾಜ ಯಾರಾದರೂ ಒಬ್ಬರೂ ಶಾಸಕರಿದ್ದಾರೋ ಅಥವಾ ಸಚಿವರಿದ್ದಾರೋ. ತಾವು ಮಾಡುತ್ತಿರುವ ಜಾತಿ, ಧರ್ಮ ಒಡೆಯುವ ಕೆಲಸವನ್ನು ನಮ್ಮ ಪಕ್ಷದ ಮೇಲೆ ಹಾಕುತ್ತಿದ್ದಾರೆ. ಕಾಂಗ್ರೆಸ್ ಎಲ್ಲಾ ಧರ್ಮ, ಜಾತಿಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷವಾಗಿದೆ. ಸಂವಿಧಾನದ ಮೇಲೆ ನಂಬಿಕೆ ಇಟ್ಟುಕೊಂಡು ನಡೆಯುತ್ತಿರುವ ಪಕ್ಷವಾಗಿದೆಯೇ ಹೊರತು ಸಂವಿಧಾನ ಬದಲಾಯಿಸಲು ಬಂದಿರುವ ಪಕ್ಷವಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ‘ಪೊಲೀಸರು ತಪ್ಪಿತಸ್ಥರಲ್ಲ’ ಎಂದ ಸರ್ಕಾರ
ಹಾನಗಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದೆ. ಬಿಜೆಪಿ ಸರಕಾರದ ದುರಾಡಳಿಕ್ಕೆ ಜನತೆ ಬೇಸತ್ತಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ ಹಾನಗಲ್ಲ ಕ್ಷೇತ್ರಕ್ಕೆ 2400 ಕೋಟಿ ರೂ. ಮಂಜೂರು ಮಾಡಿದ್ದೇನೆ. ಬಿಜೆಪಿಯವರಿಗೆ ಒಂದು ಮನೆ ಕೊಡಲು ಸಾಧ್ಯವಾಗಿಲ್ಲ. ಈಗ ಹಾನಗಲ್ಲ ವಿಶನ್ ನೆನಪಾಗಿದೆ. ಬಿಜೆಪಿಯವರಿಗೆ ಸೋಲು ಖಚಿತವಾಗಿದ್ದು, ಹಣ ಹಂಚಲು ಶುರು ಮಾಡಿದ್ದಾರೆ. ಅಲ್ಲಿನ ಮತದಾರರು ಪ್ರಜ್ಞಾವಂತರು ಯಾವುದೇ ಆಮೀಷಕ್ಕೆ ಬಲಿಯಾಗುವುದಿಲ್ಲ ಎಂದರು.