ಅರಸೀಕೆರೆ: ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸದನದಲ್ಲಿ ಎರಡು ಒಳ್ಳೆಯ ಮಾತಾಡಿದ್ದಕ್ಕೆ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಅವರ ವಿರೋಧವನ್ನು ಎದುರಿಸಬೇಕಾಯಿತು ಎಂದು ಶಾಸಕ ಕೆ.ಎಂ.ಶಿವಲಿಂಗೇ ಗೌಡ ಹೇಳಿದರು.
ಗುತ್ತಿನಕೆರೆ ಗ್ರಾಮದ ಬಳಿ ಸಂಗೋಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅರಸೀಕೆರೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಅನುದಾನ ನೀಡುವ ಮೂಲಕ ಹೆಚ್ಚಿನ ಸಹಕಾರ ನೀಡಿದ್ದಾರೆ.
ಗ್ರಾಮೀಣ ಭಾಗದ 530 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ, ಕ್ಷೇತ್ರದ ಪ್ರತಿ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲು ಹಣ ನೀಡಿದ್ದಾರೆ. ಆದ್ದರಿಂದ ಪಕ್ಷಾತೀತವಾಗಿ ಅವರನ್ನು ಸಮ್ಮಾನಿಸಿ ಗೌರವಿಸುವುದು ನನ್ನ ಕರ್ತವ್ಯವಾಗಿತ್ತು. ಆದರೆ ಇದರಿಂದಾಗಿ ಕುಮಾರಸ್ವಾಮಿ ಮತ್ತು ರೇವಣ್ಣರ ವಿರೋಧವನ್ನು ತಾನು ಎದುರಿಸಬೇಕಾಯಿತು ಎಂದರು.
ಈ ಬಗ್ಗೆ ಪಕ್ಷದ ವರಿಷ್ಠರು ಮುಕ್ತ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಬಹುದಾಗಿತ್ತು. ಆದರೆ ಜಿ.ಟಿ.ದೇವೇಗೌಡರ ಜತೆ ಮಾತುಕತೆ ನಡೆಸುವ ಮೂಲಕ ಒಂದಾದ ನಾಯಕರು ನಮ್ಮೊಂದಿಗೆ ಮಾತನಾಡುವ ವ್ಯವಧಾನ ತೋರಲಿಲ್ಲ. ನಮ್ಮ ಮತ್ತು ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿಕೊಂಡು ಬಂದರೇ ಹೊರತು ಸೌಜನ್ಯಕ್ಕಾದರೂ ಮಾತುಕತೆ ಪ್ರಯತ್ನ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಬೆಂಬಲಿಗರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವಂತೆ ಸಲಹೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರುವುದಾಗಿ ಶಿವಲಿಂಗೇಗೌಡ ಘೋಷಿಸಿದರು.
ಅರಸೀಕೆರೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರೂ.ಅನುದಾನವನ್ನು ಪಕ್ಷ ಭೇದವಿಲ್ಲದೆ ನೀಡಿದ್ದೇನೆ. ಆದನ್ನು ಸದನದಲ್ಲಿ ಪ್ರಸ್ತಾವಿಸಿ ತಮ್ಮ ಕಾರ್ಯದ ಬಗ್ಗೆ ನಾಲ್ಕು ಒಳ್ಳೆಯ ಮಾತು ಹೇಳಿದ್ದನ್ನು ಸಹಿಸದೆ ಶಿವಲಿಂಗೇಗೌಡರ ವಿರುದ್ಧ ಜೆಡಿಎಸ್ ವರಿಷ್ಠರು ಪಕ್ಷದಿಂದ ಹೊರಹಾಕುವ ಷಡ್ಯಂತ್ರ್ಯ ನಡೆಸಿದ್ದಾರೆ. ಶಿವಲಿಂಗೇಗೌಡರು ಕಾಂಗ್ರೆಸ್ ಸೇರುವುದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ.
-ಸಿದ್ದರಾಮಯ್ಯ, ಮಾಜಿ ಸಿಎಂ