ಬೆಂಗಳೂರು: ಸಚಿವ ಡಿ ಕೆ ಶಿವಕುಮಾರ್ ಹಚ್ಚಿದ ಪ್ರತ್ಯೇಕ ಧರ್ಮ ವಿವಾದದ ಕಿಚ್ಚು ಮತ್ತಷ್ಟು ಉರಿಯುತ್ತಿದೆ. ಈ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರೆ, ನನ್ನ ಹೇಳಿಕೆಗೂ ಈಗಲೂ ಬದ್ಧ ಎಂದು ಸಚಿವ ಶಿವಕುಮಾರ್ ಇನ್ನೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ,ಲಿಂಗಾಯತ ಧರ್ಮದ ಬಗ್ಗೆ ಶಿಫಾರಸು ಮಾಡುವಾಗ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿಯೇ ಕಳುಹಿಸಿದ್ದೆವು. ಆಗ ಡಿ.ಕೆ.ಶಿವಕುಮಾರ್ ಸಹ ಇದ್ದರು. ಈಗ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಅವರ ಹೇಳಿಕೆಯಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ನಾನು ಧರ್ಮ ಒಡೆಯುವ ಕೆಲಸ ಮಾಡಿಲ್ಲ. ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲ ಸಚಿವರು ಇದ್ದರು. ಆ ನಿರ್ಧಾರ ಚುನಾವಣೆ ಮೇಲೂ ಪ್ರಭಾವ ಬೀರಲಿಲ್ಲ ಎಂದರು.
ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರದಲ್ಲಿ ನಿಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಮೊದಲು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸುದ್ದಿಗಾರರು ಪ್ರಶ್ನೆ ಕೇಳಿದಾಗ, ಗರಂ ಆಗಿದ್ದರು.
ಇದರ ಮಧ್ಯೆ, ಶನಿವಾರ ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ.ಜಾಮದಾರ್ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಂಪುಟದ ಒಪ್ಪಿಗೆ ನೀಡಿದ ಏಳು ತಿಂಗಳ ನಂತರ ಸಚಿವ ಡಿ.ಕೆ.ಶಿವಕುಮಾರ್ ತದ್ವಿರುದ್ಧ ಹೇಳಿಕೆ ನೀಡಿದ್ದು, ಇದರ ಹಿಂದೆ ಕಾಣದ ಕೈಗಳ ಷಡ್ಯಂತ್ರವಿದೆ ಎಂದು ಆರೋಪಿಸಿದ್ದಾರೆ.
ಬೇಲಿಮಠದ ಶಿವರುದ್ರ ಸ್ವಾಮೀಜಿ ಪ್ರತಿಕ್ರಿಯಿಸಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಮುಂದೆಯೂ ಮುಂದುವರಿಯಲಿದೆ . ಚುನಾವಣೆಗಾಗಿ ಈ ಹೋರಾಟ ಹುಟ್ಟಿಕೊಂಡಿಲ್ಲ ಎಂದು ಹೇಳಿದ್ದಾರೆ.
ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ನಾನು ಯಾರ ಪರವೂ ಇಲ್ಲ, ವಿರುದ್ಧವೂ ಅಲ್ಲ. ಬಹಳ ದೀರ್ಘವಾಗಿ ಯೋಚನೆ ಮಾಡಿ ಹೇಳಿದ್ದೇನೆ. ಸಂಪ್ರದಾಯ, ಸಂಸ್ಕೃತಿಯಲ್ಲಿ ರಾಜಕಾರಣಿಗಳು ಭಾಗಿಯಾಗಬಾರದು.
-ಡಿ.ಕೆ ಶಿವಕುಮಾರ್