ಮೈಸೂರು: ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಎಸಗಲಾಗಿದೆ ಎಂದು ಅಂಕಿ-ಸಂಖ್ಯೆಗಳ ಸಮೇತ ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶ, ಬಿಹಾರ ರಾಜ್ಯಕ್ಕೆ ಕೊಟ್ಟ ಅನುದಾನ ಕರ್ನಾಟಕಕ್ಕೆ ಏಕಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಗೆ ಬಾಗಿನ ಸಲ್ಲಿಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿ ಕರೆದು ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎಂದಿದ್ದಾರೆ.
ರಾಜ್ಯಕ್ಕೆ ಏನೂ ಕೊಡದೆ ಅನ್ಯಾಯವಾಗಿಲ್ಲ ಎಂದರೆ ಹೇಗೆ? ಬಜೆಟ್ ಮೀಟಿಂಗ್ ಕರೆದಾಗ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದು, ಅದನ್ನು ಕೊಡಿ ಎಂದು ಕೋರಿದ್ದೆವು. ಈ ಬಾರಿಯ ಬಜೆಟ್‌ನಲ್ಲಿ ಆ ಬಗ್ಗೆ ಪ್ರಸ್ತಾವವಿಲ್ಲ. 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದ್ದ 5,495 ಕೋಟಿ ರೂ.ವಿಶೇಷ ಅನುದಾನವನ್ನೂ ಕೊಟ್ಟಿಲ್ಲ. ಪೆರಿಫೆರಲ್ ರಿಂಗ್ ರೋಡ್‌ಗೆ 3,000 ಕೋಟಿ ರೂ. ಕೊಡುವುದಾಗಿ ಹೇಳಿದ್ದರು. ಅದೂ ಇಲ್ಲ. ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ಕೊಡುವುದಾಗಿ ಹೇಳಿದ್ದರು. ಅದೂ ಬಜೆಟ್‌ನಲ್ಲಿ ಇಲ್ಲ. ಇದು ಅನ್ಯಾಯವಲ್ಲವೇ? ಆಂಧ್ರಪ್ರದೇಶ, ಬಿಹಾರ ರಾಜ್ಯಗಳಿಗೆ ಭರಪೂರ ಅನುದಾನ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.
ಎಚ್.ಡಿ. ಕುಮಾರಸ್ವಾಮಿ ಮತ್ತು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ ಅನುದಾನವನ್ನು ನಾವು ಕೊಡಿಸುತ್ತೇವೆ ಎಂದು ಪ್ರಸ್ತಾವ ಮಾಡಬಹುದಿತ್ತು. ಕೇಂದ್ರ ಸಚಿವರ ಕ್ಷೇತ್ರ ರಾಮನಗರಕ್ಕೂ ಏನಾದರೂ ಹೊಸ ಯೋಜನೆ ಬಂದಿದೆಯೇ? ಕೈಗಾರಿಕಾ ಕಾರಿಡಾರ್ ಬಂದಿದೆಯೇ? ಮೇಕೆದಾಟು, ಕೈಗಾರಿಕೆ ಹಾಗೂ ಕೇಳಿದ ಅನುದಾನ ಯಾವುದೂ ಕೊಟ್ಟಿಲ್ಲ. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವಂತೆ ಕೋರಿ¨ªೆವು. ಬಜೆಟ್‌ನಲ್ಲೂ ಪ್ರಸ್ತಾವವಿಲ್ಲ. ಮೈಸೂರು ಅಥವಾ ಹಾಸನಕ್ಕೆ ಐಐಟಿ ಮಂಜೂರು ಮಾಡಲು ಮನವಿ ಮಾಡಿದ್ದೆವು, ಅದೂ ಕೂಡ ಆಗಿಲ್ಲ. ಹೀಗಿದ್ದೂ ಅನ್ಯಾಯವಾಗಿಲ್ಲ ಎಂದರೆ ಹೇಗೆ? ನಿರ್ಮಲಾ ಸೀತಾರಾಮನ್ ಅವರು ಹಿಂದೆಯೂ ಸುಳ್ಳು ಹೇಳಿದ್ದರು, ಈಗಲೂ ಸುಳ್ಳು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ರಾಜ್ಯದಿಂದ ರಾಜ್ಯ ಸಭಾ ಸದಸ್ಯರಾಗಿರುವ ನಿರ್ಮಲಾ ಅವರು ಕೈಗಾರಿಕೆಗಳೆಲ್ಲಾ ಬೇರೆ ರಾಜ್ಯಕ್ಕೆ ಹೋಗುತ್ತಿವೆ ಎಂದೂ ಹೇಳಿದ್ದಾರೆ. ಆದರೆ ಕೇಂದ್ರ ಸರಕಾರದ ಹಣಕಾಸು ಸಚಿವರ ನೀತಿ, ಕಾರ್ಯಕ್ರಮಗಳಿಂದ ನಮ್ಮ ದೇಶಕ್ಕೆ ಬರುತ್ತಿರುವ ಶೇ. 31 ಎಫ್ಡಿಐ ಕಡಿಮೆಯಾಗಿದೆ. ಕೇಂದ್ರಕ್ಕೆ ತೆರಿಗೆ ನೀಡುವಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿದೆ. ಇನ್ನೇನು ಕೊಡುಗೆ ಕೊಡಬೇಕು? ಎಂದು ಪ್ರಶ್ನಿಸಿದರು.
ಬಿಜೆಪಿಯವರಿಂದ ರಾಜ್ಯದ
ಗೌರವಕ್ಕೆ ಮಸಿ ಬಳಿವ ಯತ್ನ
ಕರ್ನಾಟಕದ ಸಂಸದರು ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಬೇಕು. ಆದರೆ ಕರ್ನಾಟಕ ಭ್ರಷ್ಟ ರಾಜ್ಯ ಎಂದು ಅವರು ನಾಡಿಗೆ ಮಸಿ ಬಳಿಯುತ್ತಿದ್ದಾರೆ. ಕರ್ನಾಟಕ ಭ್ರಷ್ಟ ರಾಜ್ಯವಲ್ಲ. ನಾವು ಅಧಿಕಾರಕ್ಕೆ ಬಂದು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ನಾಯಕರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅವರು ಪಾದಯಾತ್ರೆ ಮಾಡಲಿ ನಮ್ಮ ಅಭ್ಯಂತರವಿಲ್ಲ. ನಾವೂ ಕೂಡ ರಾಜಕೀಯವಾಗಿ ಅವರನ್ನು ಎದುರಿಸುತ್ತೇವೆ. ವಾಲ್ಮೀಕಿ ನಿಗಮದಲ್ಲಿ 84.63 ಕೋಟಿ ರೂ. ಹಗರಣವಾಗಿದೆ ಎನ್ನುವುದು ನಿಜ. ಎಸ್‌ಐಟಿ ರಚನೆಯಾಗಿದ್ದು ತನಿಖೆಯಾಗುತ್ತಿದೆ. ಸಿಬಿಐ, ಇ.ಡಿ.ಯೂ ತನಿಖೆ ಮಾಡುತ್ತಿದ್ದಾರೆ ಎಂದರು.