ತುಮಕೂರು: ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕರು, ದೇಶ ಕಂಡ ಅತ್ಯಂತ ವಚನಭ್ರಷ್ಟ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಎಂದು ಕುಟುಕಿದ್ದಾರೆ.
ನಗರದ ಗಾಜಿನ ಮನೆಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಸಮಾವೇಶ ಉದ್ಘಾಟಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಧಾನಿ ಮೋದಿಯವರು ಅಧಿಕಾರಕ್ಕೆ ಬಂದಾಗ ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ, ಪ್ರತಿ ವರ್ಷ 2 ಲಕ್ಷ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಇದ್ಯಾವುದೂ ಆಗಲೇ ಇಲ್ಲ. ಬದಲಿಗೆ ರೈತರು ಸಾಲಗಾರರಾದರು. ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದೇನಾ ಅಚ್ಛೇ ದಿನ್ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ಅವರೇ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಲ್ಲಿದೆ? ಈ ದೇಶ ಕಂಡ ಪ್ರಧಾನ ಮಂತ್ರಿಗಳಲ್ಲಿ ಅತ್ಯಂತ ಹೆಚ್ಚು ಸುಳ್ಳು ಹೇಳಿದವರು, ಈ ದೇಶ ಕಂಡ ಅತ್ಯಂತ ವಚನಭ್ರಷ್ಟ ಪ್ರಧಾನಿ ಯಾರಾದರೂ ಇದ್ದರೆ ಅದು ಮಿ.ನರೇಂದ್ರ ಮೋದಿಜಿ ಎಂದು ಸಿದ್ದರಾಮಯ್ಯ ಕುಟುಕಿದರು.
ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದು 9 ವರ್ಷ ಕಳೆದಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಆಗಿದೆ. ಆದರೆ ಅಭಿವೃದ್ಧಿ ಶೂನ್ಯವಾಗಿದೆ ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರಬೇಕಾದರೆ 113 ಸ್ಥಾನ ಗೆಲ್ಲಬೇಕು. ಕಳೆದ ಚುನಾವಣೆಯಲ್ಲಿ ಮತದಾರ ಯಾವ ಪಕ್ಷಕ್ಕೂ ಬಹುಮತ ನೀಡಲಿಲ್ಲ ಎಂದರು.
Related Articles
ಬಿಜೆಪಿ ಜತೆ ಸೇರಿ ಸರ್ಕಾರ ಮಾಡಿದ ಜೆಡಿಎಸ್ ಪಕ್ಷ ಸೆಕ್ಯುಲರ್ ಪಾರ್ಟಿಯೇ ಎಂದು ಪ್ರಶ್ನಿಸಿದ ಅವರು, ಅಧಿಕಾರ ಸಿಕ್ಕಿದಾಗ ಸರಿಯಾಗಿ ಆಡಳಿತ ನಡೆಸದವರ ಬಗ್ಗೆ ಏನು ಹೇಳಬೇಕು? ಕೊಟ್ಟ ಕುದುರೆಯನ್ನು ಏರದವನು ಧೀರನೂ ಅಲ್ಲ, ಶೂರನೂ ಅಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಬಿಜೆಪಿಯವರು ನೇರವಾಗಿ ಅಲ್ಪಸಂಖ್ಯಾತರ ವಿರೋಧಿಗಳು. ಆದರೆ ಜೆಡಿಎಸ್ ಒಳಗೊಳಗೆ ಅಲ್ಪಸಂಖ್ಯಾತರನ್ನು ವಿರೋಧ ಮಾಡುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಈಗ ನೀಡುತ್ತಿರುವ 3 ಲಕ್ಷ ರೂ. ಬಡ್ಡಿ ರಹಿತ ಸಾಲವನ್ನು 5 ಲಕ್ಷ ರೂ.ಗೆ ಏರಿಕೆ ಮಾಡಲಾಗುವುದು, ರಾಜ್ಯದಲ್ಲಿ ತೆಂಗು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ನೆರವಿಗೆ ಬಿಜೆಪಿ ಸರ್ಕಾರ ಧಾವಿಸಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕೊಬ್ಬರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಅವರು ಭರವಸೆ ನೀಡಿದರು.
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆ.ಜಿ. ಅಕ್ಕಿ ನೀಡುವುದಾಗಿ ಘೋಷಿಸಿದ ಅವರು, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಏಕೆ ಉಚಿತವಾಗಿ ಅಕ್ಕಿ ಕೊಡುತ್ತಿಲ್ಲ? ಕರ್ನಾಟಕದಲ್ಲಿ ಮಾತ್ರ ಏಕೆ ಕೊಡಲಾಗುತ್ತಿದೆ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಅವರು, ಇಲ್ಲಿ ಉಚಿತ ಅಕ್ಕಿ ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂಬುದನ್ನು ಮರೆಯುವಂತಿಲ್ಲ ಎಂದರು.
ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆàವಾಲಾ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಬಿ.ಕೆ. ಹರಿಪ್ರಸಾದ್ ಸೇರಿ ಹಲವು ಗಣ್ಯರು ಇದ್ದರು.
ಮಿ.ಬಸವರಾಜ ಬೊಮ್ಮಾಯಿ, ನಿಮ್ಮ ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುತ್ತಿರುವುದಕ್ಕೆ ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಹೇಳುತ್ತಿದ್ದೀರಿ. ನಿಮಗೆ ತಾಕತ್ ಇದ್ರೆ , ಧಮ್ ಇದ್ರೆ ತನಿಖೆ ನಡೆಸಿ. ನಿಮ್ಮ ಕಾಲದ ಹಗರಣಗಳು, ನಮ್ಮ ಕಾಲದ ಹಗರಣಗಳು ತನಿಖೆಯಾಗಲಿ. ಆಗ ಈ ಡಬಲ್ ಇಂಜಿನ್ ಸರ್ಕಾರದ ಭ್ರಷ್ಟಾಚಾರ ಗೊತ್ತಾಗುತ್ತದೆ.
-ಸಿದ್ದರಾಮಯ್ಯ, ಮಾಜಿ ಸಿಎಂ