ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಪ್ರಜಾಪ್ರಭುತ್ವ ವಿರೋಧಿಯಾಗಿದ್ದಾರೆ. ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಂವಿಧಾನ ಸುರಕ್ಷಿತವಾಗಿಲ್ಲ. ನಾವು – ನೀವು ಉಳಿಯಬೇಕಾದರೆ ಸಂವಿಧಾನ ಉಳಿಯಲೇಬೇಕು. ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಗೆ ಮತ ಹಾಕಬೇಕು. ಮುಸಲೋನಿ, ಹಿಟ್ಲರ್ ಸಿದ್ಧಾಂತದಲ್ಲಿ ಬಿಜೆಪಿ ಪಕ್ಷದವರು ನಂಬಿಕೆ ಇಟ್ಟಿದ್ದಾರೆ. ಈ ದೇಶದಲ್ಲಿ ಸಂವಿಧಾನ ಜಾರಿಯಾದಾಗ ಅದನ್ನು ವಿರೋಧಿಸಿದ್ದು ಆರ್.ಎಸ್.ಎಸ್. ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಎಂದು ಕೊಳ್ಳೇಗಾಲ ನಗರದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಅವರನ್ನು ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
”ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗರ ಎಸ್‍ಸಿಎಸ್‍ಪಿ/ಟಿಎಸ್‍ಪಿ ಕಾಯ್ದೆ ತಂದು, ಜನಸಂಖ್ಯೆಗೆ ಅನುಗುಣವಾಗಿ ವೆಚ್ಚ ಮಾಡಬೇಕೆಂದು ತೀರ್ಮಾನಿಸಿದ್ದು, ಗುತ್ತಿಗೆಗಳಲ್ಲಿ ಮೀಸಲಾತಿ ತಂದಿದ್ದು, ಬಡ್ತಿಯಲ್ಲಿ ಮೀಸಲಾತಿ ತಂದಿದ್ದು ನನ್ನ ನೇತೃತ್ವದ ಸರ್ಕಾರ.ಬಸವಾದಿ ಶರಣರ ಮೇಲೆ ನಂಬಿಕೆ ಇಟ್ಟಿರುವ ನಾವು ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದೇವೆ. ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡುತ್ತೇವೆ, ಯುವಕರಿಗೆ ಒಂದು ವರ್ಷಕ್ಕೆ ಒಂದು ಲಕ್ಷ ರೂ.ಗಳನ್ನು ಕೊಡುವ ಮಾತು ನೀಡಿದ್ದೇವೆ. ಇದಕ್ಕಾಗಿ ನ್ಯಾಯಪತ್ರವನ್ನು ಬಿಡುಗಡೆ ಮಾಡಲಾಗಿದೆ. ಅನೇಕ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ” ಎಂದು ಆಕ್ರೋಶ ಹೊರ ಹಾಕಿದರು.
”ಸಿದ್ದರಾಮಯ್ಯನಿಗೆ ಹಿಂದೂಗಳ ಮತವೇ ಬೇಡ ಎಂದಿದ್ದಾರೆ ಎಂದು ಪುಕಾರು ಹೊರಡಿಸಿದ್ದಾರೆ. ಇಂಥ ಸುಳ್ಳುಗಾರ, ಮೋಸಗಾರರಿಗೆ ಮತ ಹಾಕಬೇಕೇ? ಲೋಕಸಭಾ ಚುನಾವಣೆಯ ನಂತರ ಗ್ಯಾರಂಟಿ ಯೋಜನೆಗಳು ನಿಲ್ಲಲಿವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ನಾವು ಕೊಟ್ಟ ಮಾತಿಗೆ ತಪ್ಪುವವರಲ್ಲ” ಎಂದು ಟೀಕೆಗೆ ತಿರುಗೇಟು ನೀಡಿದ್ದಾರೆ.
”2014 ರಲ್ಲಿ ಡೀಸೆಲ್ ಬೆಲೆ ಒಂದು ಲೀಟರ್‌ಗೆ 49 ರೂ.ಗಳಿತ್ತು, ಇಂದು 95 ರೂ. ಆಗಿದೆ. ಪೆಟ್ರೋಲ್ ಬೆಲೆ 71 ರೂ.ಗಳಿತ್ತು, ಈಗ 110 ರೂ.ಗಳಾಗಿದೆ. ಸಿಲಿಂಡರ್ ಬೆಲೆ 410 ರೂ. ಇದ್ದರೆ ಈಗ 950 ರೂ.ಗಳಾಗಿದೆ. ಇಡೀ ದೇಶದ ಜನರಿಗೆ ಅಚ್ಚೇ ದಿನ್ ಆಯೇಗಾ ಎಂದು ನರೇಂದ್ರ ಮೋದಿ ಹೇಳಿದ್ದರು. ಒಳ್ಳೇ ದಿನಗಳು ಬಂದವೇ? ಮೇಕ್ ಇನ್ ಇಂಡಿಯಾ ಎಂದರು, ಇಂದಿನವರೆಗೆ ಮೇಕ್ ಇನ್ ಇಂಡಿಯಾ ಆಗಲಿಲ್ಲ. ಇಂದಿಗೂ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಲೇ ಇದ್ದಾರೆ.ಸಬ್ ಕಾ ಸಾತ್, ಸಬ್ ಕಾ ವಿಶ್ವಾಸ್ ಎನ್ನುತ್ತಾರೆ. ಈ ದೇಶದ 140 ಕೋಟಿ ಜನರ ಅಭಿವೃದ್ಧಿ ಎಂದರು, ಇಂದಿಗೂ ಏನೂ ಮಾಡಲಿಲ್ಲ. ಇವರು ಅಭಿವೃದ್ಧಿ ಮಾಡಿರುವುದು ಅದಾನಿ, ಅಂಬಾನಿ, ಟಾಟಾ, ಬಿರ್ಲಾ ಅವರನ್ನು ಹೊರತು ಬಡವರ, ರೈತರ, ಮಹಿಳೆಯರ ಅಭಿವೃದ್ಧಿ ಆಗಲಿಲ್ಲ. ಇಷ್ಟಾದರೂ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಕಾ?ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನ್ನಬಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್, ಸಾಲಮನ್ನಾ, ಮೈತ್ರಿ, ಮನಸ್ವಿನಿ, ಶಾದಿ ಭಾಗ್ಯ, ಶೂ ಭಾಗ್ಯ ಮುಂತಾದ ಯೋಜನೆಗಳನ್ನು ಕೊಟ್ಟಿದ್ದೆ. ನಾವು ನುಡಿದಂತೆ ನಡೆದಿದ್ದೇವೆ, ಅವರು ನಡೆಯುವುದಿಲ್ಲ ಎನ್ನುವುದೇ ಬಿಜೆಪಿ ಹಾಗೂ ಕಾಂಗ್ರೆಸ್ಸಿನ ನಡುವೆ ಇರುವ ವ್ಯತ್ಯಾಸ” ಎಂದರು.
”ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಪ್ರತಿಯೊಬ್ಬನ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ಹಾಕಿದರೆ?
ರೈತರ ಆದಾಯ 5 ವರ್ಷಗಳಲ್ಲಿ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು, ಮಾಡಿದರೆ? ರೈತರು ನೆಮ್ಮದಿಯಾಗಿದ್ದಾರೆಯೇ? ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಹೇಳಿದ್ದರು, ಮಾಡಿದರೆ? ಈವರೆಗೆ 20 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬೇಕಿತ್ತು ಆದರೆ ಈವರೆಗೆ 20 ಲಕ್ಷ ಉದ್ಯೋಗವನ್ನೂ ಸೃಷ್ಟಿಸಲಾಗಿಲ್ಲ.ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಒಂದು ಬೆಳೆ ತೆಗೆಯಲು ತಗಲುವ ಖರ್ಚಿನ ಮೇಲೆ ಶೇ.50 ರಷ್ಟು ಕೊಡುವುದಾಗಿ ಹೇಳಿದ್ದರು. ನೂರು ರೂ.ಗಳನ್ನು ಖರ್ಚು ಮಾಡಿದ್ದರೆ 150 ರೂ.ಗಳನ್ನು ಲಾಭ ಮಾಡಿಕೊಡುವುದಾಗಿ ಹೇಳಿದ್ದರು. ಇಂದಿನವರೆಗೆ ಜಾರಿ ಮಾಡಲಿಲ್ಲ. ಪೆಟ್ರೋಲ್, ಡೀಸಲ್, ಗ್ಯಾಸ್ ಬೆಲೆಯನ್ನು ಇಳಿಸುವುದಾಗಿ ಹೇಳಿದ್ದರು, ಅಕ್ಕಿ, ಬೇಳೆ, ರಾಗಿ ಜೋಳ ಬೆಲೆ ಇಳಿಯುತ್ತದೆ ಎಂದು ಹೇಳಿದ್ದರು.ನರೇಂದ್ರ ಅವರು ಏರುತ್ತಿರುವ ಬೆಲೆಗಳನ್ನು ಇಳಿಸಲು ಪ್ರಯತ್ನ ಮಾಡಿದರೆ?” ಎಂದು ಪ್ರಶ್ನಿಸಿದ್ದಾರೆ.
”ಬಡವರು, ರೈತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಏನು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅವರು ಯಾವ ಸಾಧನೆಯನ್ನೂ ಮಾಡಿಲ್ಲ. ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಒಂದು ವರ್ಷ ಮುಖ್ಯಮಂತ್ರಿಯಾಗಿದ್ದರು. ನಂತರ ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. 5 ವರ್ಷಗಳ ಅವಧಿಯಲ್ಲಿ ಏನೂ ಕೆಲಸ ಮಾಡಿಲ್ಲ. ಅವರು ಕೇಳುತ್ತಿರುವುದು ಮೋದಿಗೆ ಮತ ಹಾಕಿ ಎಂದು ಕೆಲಸದ ಆಧಾರದ ಮೇಲೆ ಅಲ್ಲ. ಇವರ್ಯಾರಿಗೂ ಮತ ಕೇಳಲು ಮುಖವೂ ಇಲ್ಲ, ನೈತಿಕತೆಯೂ ಇಲ್ಲ. ಇವರಿಗೆ ನರೇಂದ್ರ ಮೋದಿ ಬಿಟ್ಟರೆ ಬೇರೆ ಚುನಾವಣ ವಸ್ತುವೇ ಇಲ್ಲ. ಎನ್‍ಡಿಎ ನೇತೃತ್ವದಲ್ಲಿ 10 ವರ್ಷಗಳ ಕಾಲ ಪ್ರಧಾನಮಂತ್ರಿಯಾಗಿರುವ ಮೋದಿ ಏನು ಹೇಳಿದ್ದರು? ಏನು ಮಾಡಿದ್ದಾರೆ? ಎಂದು ಒಮ್ಮೆ ಯೋಚಿಸಿ” ಎಂದರು.
”ಕಳೆದ ವಿಧಾನಸಭಾ ಚುನಾವಣೆಯಲ್ಲಿ 43% ಮತಗಳನ್ನು ಪಡೆದು 136 ಸ್ಥಾನಗಳನ್ನು ಪಡೆದಿದ್ದೇವೆ. ಅಧಿಕಾರದಲ್ಲಿದ್ದ ಬಿಜೆಪಿ ಕೇವಲ 66 ಸ್ಥಾನಗಳನ್ನು ಪಡೆಯಿತು. ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷ 19 ಸ್ಥಾನಗಳನ್ನು ಪಡೆಯಿತು. ಈಗ ಅವರಿಬ್ಬರಿಗೂ ಈ ಚುನಾವಣೆಯಲ್ಲಿ ಭಯ ಬಂದಿದೆ. ಒಟ್ಟುಗೂಡಿ ಕಾಂಗ್ರೆಸ್ ಪಕ್ಷವನ್ನು ಎದುರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಸಿದ್ಧಾಂತ, ಕಾರ್ಯಕ್ರಮ ಇಲ್ಲದೇ, ಕಾಂಗ್ರೆಸ್ ಸೋಲಿಸಬೇಕು ಎನ್ನುವುದೊಂದೇ ಬಿಜೆಪಿ – ಜೆಡಿಎಸ್ ಪಕ್ಷಗಳ ಗುರಿ” ಎಂದು ಮೈತ್ರಿಯ ಕುರಿತು ಟೀಕೆ ಮಾಡಿದ್ದಾರೆ.