Advertisement

ಬಿಎಸ್‌ವೈ ಅಧಿಕಾರದಿಂದ ಬೇಗ ತೊಲಗಿದಷ್ಟು ರಾಜ್ಯಕ್ಕೆ ಅನುಕೂಲ: ಸಿದ್ದರಾಮಯ್ಯ

05:49 PM Jun 21, 2021 | Team Udayavani |

ಕೊಪ್ಪಳ: ನಾನು ಮುಖ್ಯಮಂತ್ರಿ ಆಗ್ತೀನಿ ಎಂದು ಎಲ್ಲೂ ಹೇಳಿಲ್ಲ, ಕೆಲವು ಶಾಸಕರು ವಯಕ್ತಿಕವಾಗಿ ನನ್ನ ಮೇಲಿನ ಅಭಿಮಾನದಿಂದ ಆ ರೀತಿ ಹೇಳಿರಬಹುದು. ಚುನಾವಣೆಯಲ್ಲಿ ಶಾಸಕರು ಗೆದ್ದ ಮೇಲೆ ಅವರ ಅಭಿಪ್ರಾಯದ ಮೇಲೆ ಹೈಕಮಾಂಡ್ ಸಿಎಂ ಯಾರೆಂದು ತೀರ್ಮಾನ ಮಾಡುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಶಾಸಕ ಜಮೀರ್ ಅಹ್ಮದ್ ನಾನು ಸಿಎಂ ಆಗ್ಬೇಕು ಎನ್ನುವ ಹೇಳಿದ ವಿಚಾರದ ಕುರಿತು ಇದು ನನ್ನ ವಯಕ್ತಿಕ ಅಭಿಪ್ರಾಯ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯಾಗಿ ಶಾಸಕರು ನಾನು ಸಿಎಂ ಆಗಬೇಕು ಎನ್ನುವ ಸ್ವಂತ ಅಭಿಪ್ರಾಯ ಹೇಳುತ್ತಿದ್ದಾರೆ. ಆದರೆ ಅದು ಅವರ ವಯಕ್ತಿಕ ಹೇಳಿಕೆಯಾಗಿವೆ. ಅದು ಪಕ್ಷದ ಹೇಳಿಕೆಯಲ್ಲ. ಕಾಂಗ್ರೆಸ್‌ನಲ್ಲಿ ಯಾವ ಬಣವೂ ಇಲ್ಲ. ಡಿಕೆಶಿ, ಸಿದ್ದರಾಮಯ್ಯ ಬಣವಿಲ್ಲ. ನಮ್ಮದು ಕಾಂಗ್ರೆಸ್ ಪಕ್ಷ ಒಂದೇ ಅಷ್ಟೇ. ಡಿಕೆಶಿ ಅವರು ನನಗೆ ಹೇಳಿಯೇ ದೆಹಲಿಗೆ ತೆರಳಿದ್ದಾರೆ. ಅವರ ದೆಹಲಿಯ ಭೇಟಿಯ ಹಿಂದೆ ಯಾವ ವಿದ್ಯಮಾನವೂ ಇಲ್ಲ ಎಂದರು.

ಪಕ್ಷ ಬಿಟ್ಟು ಬಿಜೆಪಿಗೆ ಹೋದ ಶಾಸಕರನ್ನು ವಾಪಸ್ಸು ಬಂದರೆ ಸೇರಿಸಿಕೊಳ್ಳಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ಅವರು ನಮ್ಮ ಪಕ್ಷಕ್ಕೆ ದ್ರೋಹ ಮಾಡಿ, ಕೋಮುವಾದಿ ಬಿಜೆಪಿ ಸರ್ಕಾರ ಮಾಡಿದವರನ್ನು ನಾವು ಮತ್ತೆ ಸೇರಿಸಿಕೊಳ್ಳಲ್ಲ. ರಮೇಶ ಜಾರಕಿಹೊಳೆ ಮುಂಬೈ ವಾಸ್ತವ್ಯದ ವಿಚಾರದ ಬಗ್ಗೆ ಗೊತ್ತಿಲ್ಲ ಎಂದರು.

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಿಂದ ಏಷ್ಟು ಬೇಗ ತೊಲಗುತ್ತಾರೋ ಅಷ್ಟು ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ರಾಜ್ಯದಲ್ಲಿ ಇನ್ನೆರಡು ವರ್ಷ ಚುನಾವಣೆ ಮುಂದಿದೆ. ನಾನೀಗ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದೇನೆ ಎಂದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರವಧಿಯಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 125 ಡಾಲರ್ ಇತ್ತು. ಇಂದು 70 ಡಾಲರ್ ಇದೆ. ಹಾಗಾದರೆ ತೈಲ ಬೆಲೆ ಯಾಕೆ ಕಡಿಮೆಯಾಗಿಲ್ಲ. ಬಿಜೆಪಿಯವರು  ಸುಳ್ಳು ಹೇಳುತ್ತಿದ್ದಾರೆ. ನಾನೊಬ್ಬ ಮಾಜಿ ಹಣಕಾಸು ಸಚಿವನಾಗಿ ಹೇಳುತ್ತಿದ್ದೇನೆ. ಮೋದಿ ಮೊದಲು ತೈಲದ ಮೇಲಿನ ತೆರಿಗೆ ಶೇ.50 ರಷ್ಟು ಕಡಿಮೆ ಮಾಡಲಿ. ರಾಜ್ಯದಲ್ಲೂ ಶೇ.50 ರಷ್ಟು ತೈಲದ ಮೇಲಿನ ತೆರಿಗೆ ಕಡಿಮೆಯಾಗಲಿ. ರಾಜ್ಯ ಸರ್ಕಾರ ಹೆಚ್ಚುವರಿ ತೆರಿಗೆಯನ್ನು ವಿಧಿಸುತ್ತಿದ್ದಾರೆ. ಕೇಂದ್ರ ಕಡಿಮೆ ಮಾಡಿದ್ರೆ ರಾಜ್ಯ ಸರ್ಕಾರಗಳು ತೈಲದ ಮೇಲಿನ ಸುಂಕ ಕಡಿಮೆ ಮಾಡುತ್ತವೆ. ಪಕ್ಕದ ಪಾಕಿಸ್ತಾನದಲ್ಲಿ 52ರೂ.ಗೆ ಪೆಟ್ರೋಲ್ ಮಾರಾಟವಾಗುತ್ತಿದೆ. ದೇಶದಲ್ಲಿ 1 ಲೀ.ಪೆಟ್ರೋಲ್‌ಗೆ 37 ರೂ. ಬೀಳುತ್ತೆ. ಆದರೆ 63ರೂ. ಸರ್ಕಾರ ತೆರಿಗೆ ಹಾಕುತ್ತಿವೆ. ಅದರಲ್ಲಿ 30 ರೂ. ಕಡಿಮೆ ಮಾಡಲಿ. ಯಾಕೇ ಜನರ ರಕ್ತ ಕುಡಿತಾ ಇದ್ದೀರಿ, ಹೆಚ್ಚುವರಿ ತೆರಿಗೆ ಯಾಕೆ ವಿಧಿಸುತ್ತಿದ್ದೀರಿ ಎಂದು ಖಾರವಾಗಿ ನುಡಿದರು.

Advertisement

ರಾಜ್ಯ ಬಿಜೆಪಿಯಲ್ಲಿ ಗೊಂದಲ ಇಲ್ಲದೇ ಅರುಣ್ ಸಿಂಗ್ ಅವರು ಸುಮ್ನೆ ಬಂದಿದ್ರಾ ? ಅವರಲ್ಲಿ ಗೊಂದಲ ಇಲ್ಲಾ ಅಂದರೆ ಯಾಕೆ ಬರ‍್ತಾ ಇದ್ರು, ಸಿಂಗ್ ಅವರು ಕೊರೊನಾ ಬಗ್ಗೆ ಮಾತನಾಡಿದ್ರಾ..? ಸಿಎಂ ಬದಲಾವಣೆ ಬಗ್ಗೆ ಪದೇ ಪದೆ ಚರ್ಚೆಯಾಗ್ತಿರೋದಕ್ಕೆ ಸಭೆ ಮಾಡಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಬದಲಾಗ್ತಾರೆ ಎಂದರು.

ಸೋಂಕಿತರ ಸಾವಿಗೆ ಬಿಎಸ್‌ವೈ ಸರ್ಕಾರ ಕಾರಣ:

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಲ್ಲಿ ಪೂರ್ವ ತಯಾರಿ ಇಲ್ಲದೆ ಕಾರಣಕ್ಕೆ ಸಾವು ಸಂಭವಿಸಿದವು. ಆಕ್ಸಿಜನ್, ಬೆಡ್, ವೆಂಟಿಲೇಟರ್ ಇಲ್ಲದೇ ಸಾವಿರಾರು ಜನರು ಸತ್ತರು. ಇದಕ್ಕೆಲ್ಲಾ ಬಿಜೆಪಿ ಸರ್ಕಾರ, ಸಿಎಂ ಬಿ.ಎಸ್.ಯಡಿಯೂರಪ್ಪ ಕಾರಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗುಡುಗಿದರು.

ಕೋವಿಡ್ 2ನೇ ಅಲೆ ಬರುತ್ತೆ ಎಂದು ಗೊತ್ತಿದ್ದರೂ ಇವರು ಪೂರ್ವ ತಯಾರಿ ಮಾಡಿಕೊಳ್ಳಲಿಲ್ಲ. ಜನರು ಆಕ್ಸಿಜನ್, ಬೆಡ್, ವೆಂಟಿಲೇಟರ್, ಅಂಬುಲೆನ್ಸ್ ಇಲ್ಲದೆ ಸತ್ತು ಹೋದರು. ಲಾಕ್‌ಡೌನ್ ಮಾಡಿದ ವೇಳೆ ಬಡವರು ಊಟ ಇಲ್ಲದೆ ಸಂಕಷ್ಟ ಅನುಭವಿಸಿದರು. ಬಿಪಿಎಲ್ ಕುಟುಂಬಕ್ಕೆ 10 ಸಾವಿರ ಕೊಡಿ, 10 ಕೆಜಿ ಅಕ್ಕಿ ಕೊಡಿ ಎಂದು ಒತ್ತಾಯಿಸಿದ್ದೆವು. ಬಿಜೆಪಿ ಕೊಡಲಿಲ್ಲ. ಬಿಎಸ್‌ವೈ ಅವರಪ್ಪನ ಮನೆಯಿಂದ ತಂದು ಕೊಡ್ತಿದ್ರಾ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next