ಉಡುಪಿ: ”ನಾನು ಕೃಷ್ಣ ಮಠಕ್ಕೆ ಈಗ ಹೋಗ್ತಾ ಇಲ್ಲ, ಹಿಂದೆ ಹೋಗಿದ್ದೆ, ನನಗೆ ಪೇಜಾವರ ಶ್ರೀಗಳೊಂದಿಗೆ ಯಾವ ಸಂಘರ್ಷವೂ ಇಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರು ಮಠಕ್ಕೆ ತೆರಳುತ್ತೀರಾ ಎಂದು ಪ್ರಶ್ನಿಸಿದಾಗ ಉತ್ತರ ನೀಡಿದ ಸಿಎಂ ” ಮಠಕ್ಕೆ ನನ್ನನ್ನು ಯಾರೂ ಕರೆದೂ ಇಲ್ಲ, ಈಗ ಹೋಗ್ತಾನೂ ಇಲ್ಲ” ಎಂದರು.
” ಹಿಂದೆ ಕೃಷ್ಣನ ದರ್ಶನ ಮಾಡಿದ್ದೆ. ದೇವಸ್ಥಾನಕ್ಕೆ ಹೋಗುವುದು ಅವರವರ ನಂಬಿಕೆಗೆ ಬಿಟ್ಟದ್ದು, ನಾನು ಹೋಗದೆ ಇರುವುದು ಉದ್ದೇಶಪೂರ್ವಕವಾಗಿ ಅಲ್ಲವೇ ಅಲ್ಲ” ಎಂದರು.
”ಪೇಜಾವರ ಶ್ರೀಗಳೊಂದಿಗೆ ಸಂಘರ್ಷ ಇಲ್ಲ, ರಾಜ್ಯದ ಆರೂವರೆ ಕೋಟಿ ಜನರೊಂದಿಗೆ ನನಗೆ ಉತ್ತಮ ಬಾಂಧವ್ಯ ಇದೆ” ಎಂದರು.
ಉಡುಪಿಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಬಿಆರ್‌ಎಸ್ ಸ್ವಾಸ್ಥ್ಯ ಮತ್ತು ಸಂಶೋಧನ ಸಂಸ್ಥೆ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಕರ್ನಾಟಕ ಸರಕಾರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನೆಗೆಂದು ಸಿಎಂ ಸಿದ್ದರಾಮಯ್ಯ ಉಡುಪಿಗೆ ಆಗಮಿಸಿದ್ದರು.