ಜಮಖಂಡಿ: ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ ಅಲ್ಲ. ಈ ಬಗ್ಗೆ ಅವರಿಗೂ ಖಚಿತತೆ ಇಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಮುಖ್ಯಮಂತ್ರಿ ಮಾಡುವ ಪ್ರಕ್ರಿಯೆದಿಂದಲೇ ಭಿನ್ನಮತ ಆರಂಭಗೊಂಡಿದೆ. ಆಡಳಿತ ಚುಕ್ಕಾಣಿ ನಡೆಸುವ ನಿಟ್ಟಿನಲ್ಲಿ ಕರಾರು ಒಪ್ಪಂದದ ಮೂಲಕ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.
ನಾಲ್ಕೈದು ಕ್ಯಾಬಿನೆಟ್ ಸಚಿವರು ಸಿದ್ದರಾಮಯ್ಯನವರು ಪೂರ್ಣಾವ ಧಿ ಮುಖ್ಯಮಂತ್ರಿಗಳೆಂದು ಹೇಳಿಕೆ ನೀಡಿದ್ದಾರೆ ಹೊರತು ಸಿಎಂ ಸಿದ್ದರಾಮಯ್ಯ ನಾನೇ ಐದು ವರ್ಷವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿ ಇರುತ್ತೇನೆಂದು ಯಾವ ಸಭೆ-ಸಮಾರಂಭದಲ್ಲೂ ಹೇಳಿಲ್ಲ. ಇದರಿಂದ ಗೊತ್ತಾಗುತ್ತಿದೆ ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಗಳಲ್ಲ. ಮೂವರು ಉಪಮುಖ್ಯಮಂತ್ರಿಗಳು ನೇಮಕಕ್ಕೆ ಅವರ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗಿದೆ. ಸ್ವತಃ ಕಾಂಗ್ರೆಸ್ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲವೆಂದು ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್ ಸರ್ಕಾರದ ಆಡಳಿತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗುತ್ತಿದೆ. ಐದು ಗ್ಯಾರಂಟಿಗಳ ಘೋಷಣೆ ಅನುಷ್ಠಾನ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಗೃಹಜ್ಯೋತಿ, ಶಕ್ತಿ ಯೋಜನೆಯಲ್ಲಿ ಫಲಾನುಭಗಳಿಗೆ ಸ್ಪಷ್ಟತೆಯಿಲ್ಲ. ಗೃಹಲಕ್ಷ್ಮಿ ಫಲಾನುಭವಿಗೆ ಮೂರು ತಿಂಗಳಲ್ಲಿ ಕೇವಲ ಒಂದು ತಿಂಗಳ ಹಣ ಜಮಾ ನೀಡಿದ್ದಾರೆ. ಬೇರೆ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಲೋಕಸಭಾ ಚುನಾವಣೆವರೆಗೆ ಗ್ಯಾರಂಟಿ ಯೋಜನೆಗಳು ಆಮೆವೇಗದಲ್ಲಿ ಸಾಗುವ ಸಾಧ್ಯತೆಯಿದೆ. ನಂತರ ನಮಗೂ ಮತ್ತು ರಾಜ್ಯದ ಜನತೆಗೆ ಗ್ಯಾರಂಟಿ ಮುಂದುವರಿಸುವ ಭರವಸೆ ಇಲ್ಲ ಎಂದರು.