Advertisement

ಸಿದ್ದು ,ಪರಂ ಪಟ್ಟು;ಹೈಕಮಾಂಡ್‌ಗೆ ಇಕ್ಕಟ್ಟು

01:32 AM Mar 13, 2019 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆಗೆ ಜೆಡಿಎಸ್‌ ಜೊತೆಗಿನ ಸೀಟು ಹಂಚಿಕೆ ಗೊಂದಲ ಕಾಂಗ್ರೆಸ್‌ ನಾಯಕರಿಬ್ಬರ ಪ್ರತಿಷ್ಠೆಗೆ ಕಾರಣವಾಗಿದೆ. ತಮ್ಮ, ತಮ್ಮ ತವರು ಕ್ಷೇತ್ರಗಳಲ್ಲಿ ಜೆಡಿಎಸ್‌ ಕೇಳಿರುವ ಸೀಟುಗಳನ್ನು ಬಿಟ್ಟು ಕೊಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಪರಮೇಶ್ವರ್‌ ನಿರಾಕರಿಸಿದ್ದಾರೆ. ಇಬ್ಬರೂ ಹಿರಿಯ ನಾಯಕರ ತವರು ಪ್ರೀತಿ, ಕಾಂಗ್ರೆಸ್‌ ಹೈಕಮಾಂಡ್‌ನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

Advertisement

ಜೆಡಿಎಸ್‌ ಕೇಳಿರುವ ಹತ್ತು ಕ್ಷೇತ್ರಗಳ ಪಟ್ಟಿಯಲ್ಲಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರ ತವರು ಜಿಲ್ಲೆ ತುಮಕೂರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ಕೂಡ ಸೇರಿವೆ. ಜೆಡಿಎಸ್‌ಗೆ ಎಂಟು ಕ್ಷೇತ್ರ ಬಿಟ್ಟು ಕೊಡಲು  ಕಾಂಗ್ರೆಸ್‌ ನಾಯಕರು ಸೋಮವಾರ ಯಾವ ಎಂಟು  ಕ್ಷೇತ್ರಗಳನ್ನು ಬಿಟ್ಟು ಕೊಡಬೇಕು ಎನ್ನುವ  ವಿಚಾರದಲ್ಲಿ ಗೊಂದಲ ಉಂಟಾಗಿದೆ. ಮೈಸೂರು ಕ್ಷೇತ್ರವನ್ನು ಬಿಟ್ಟು ಕೊಡಲು ಸಿದ್ದರಾಮಯ್ಯ ಸುತಾರಾಂ ಒಪ್ಪುತ್ತಿಲ್ಲ. ಇನ್ನು, ಉಪ ಮುಖ್ಯಮಂತ್ರಿ ಪರಮೇಶ್ವರ್‌ ಕೂಡಾ ತಮ್ಮ ಜಿಲ್ಲೆಯಾದ ತುಮಕೂರು ಕ್ಷೇತ್ರವನ್ನು ಬಿಟ್ಟು ಟ್ಟುಕೊಡದೆ ಜಿಲ್ಲೆಯನ್ನು ಈ ಬಾರಿ ಗಟ್ಟಿಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ಬೇಡಿಕೆ ಇಟ್ಟಿರುವ ಎಂಟು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳನ್ನು ಬಿಟ್ಟು ಕೊಡುವ ಎಲ್ಲಾ ನಾಯಕರಲ್ಲಿಯೂ ಸಹಮತ ವ್ಯಕ್ತವಾಗಿದೆ. ಆದರೆ, ಮೈಸೂರು ಮತ್ತು ತುಮಕೂರು ಕ್ಷೇತ್ರಗಳನ್ನು ಇಬ್ಬರೂ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದರಿಂದ ರಾಜ್ಯ ನಾಯಕರೂ ಗೊಂದಲಕ್ಕೊಳಗಾಗಿದ್ದಾರೆ.

ಪ್ರತಿಷ್ಠೆಗಾಗಿ ಪಟ್ಟು: ತಮ್ಮ ತವರು ಜಿಲ್ಲೆಯಲ್ಲಿ ತಮ್ಮದೇ ಸಂಸದರನ್ನು ಹೊಂದಬೇಕೆಂಬ ಬಯಕೆಯನ್ನು ಇಬ್ಬರೂ ನಾಯಕರು ಹೊಂದಿದ್ದಾರೆ. ಅದೇ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರು ಮೈಸೂರು ಕ್ಷೇತ್ರವನ್ನು ಈಗಲೂ ತಮ್ಮ ಹಿಡಿತದಲ್ಲೇ ಉಳಿಸಿಕೊಳ್ಳಬೇಕು ಎಂಬ ಇಚ್ಚೆ ಹೊಂದಿದ್ದಾರೆ. ಅಲ್ಲದೆ, ಕ್ಷೇತ್ರದಲ್ಲಿ ತಮ್ಮ ಆಪ್ತರಿಗೆ ಟಿಕೆಟ್‌ ಕೊಡಿಸಿ ಗೆಲ್ಲಿಸಿಕೊಂಡು ಬರುವ ಲೆಕ್ಕಾಚಾರ ಹಾಕಿದ್ದಾರೆ. ಸಿದ್ದರಾಮಯ್ಯ ಅವರ ಹಾದಿ ತುಳಿದಿರುವ ಪರಮೇಶ್ವರ್‌ ಕೂಡ ತಮ್ಮ ತವರು ಜಿಲ್ಲೆಯಲ್ಲಿ ತಮ್ಮದೇ ಹಿಡಿತ ಸಾಧಿಸಲು ಕಾರ್ಯತಂತ್ರ ರೂಪಿಸಿದ್ದಾರೆ. ಅದೇ ಕಾರಣಕ್ಕಾಗಿ ತುಮಕೂರು ಕ್ಷೇತ್ರವನ್ನು ಬಿಟ್ಟು ಕೊಡಲು ಅವರು ನಿರಾಕರಿಸುತ್ತಿದ್ದಾರೆ. ತುಮಕೂರಿನಲ್ಲಿ ತಮ್ಮ ಆಪ್ತರಾಗಿರುವ ಮುದ್ದಹನುಮೇಗೌಡ ಕೊಡಿಸಲು ಕಸರತ್ತು ನಡೆಸಿದ್ದಾರೆ. 

ಅಂತಿಮ ತೀರ್ಮಾನ ರಾಹುಲ್‌ ಹೆಗಲಿಗೆ:
ಸೋಮವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರ ನೇತೃತ್ವದಲ್ಲಿ  ನಡೆದ ಸಭೆಯಲ್ಲಿ ತವರು ಕ್ಷೇತ್ರಗಳಿಗಾಗಿ ಹೈಕಮಾಂಡ್‌ಗೆ ಬಿಇಬ್ಬರೂ ನಾಯಕರ ಪ್ರತಿಷ್ಠೆಯಿಂದಾಗಿ ಕೆ.ಸಿ.ವೇಣುಗೋಪಾಲ್‌ ಅವರು ಎರಡೂ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ವಿಚಾರದಲ್ಲಿ ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿಯೇ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಯಾರ ಪ್ರತಿಷ್ಠೆಗೆ ಪೆಟ್ಟು ಬೀಳುತ್ತದೆ ಎಂಬುದನ್ನು ಕಾದು ನೋಡಬೇಕು. ಅದಕ್ಕೆ ದೇವೇಗೌಡರ ಸಮ್ಮತಿಯೂ ಅಗತ್ಯವಿದೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next