Advertisement

ಸಿದ್ದರಾಮಯ್ಯ “ಮಾತೃಪೂರ್ಣ’ಈಗ ಅಪೂರ್ಣ

06:35 AM Aug 04, 2018 | |

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ “ಮಾತೃಪೂರ್ಣ’ ಯೋಜನೆ ಜಾರಿಯಾಗಿ ವರ್ಷ ತುಂಬುವ ಮುನ್ನವೇ ತೆರೆ‌ಮರೆಗೆ ಸರಿಯುವ ಲಕ್ಷಣ ಕಾಣಿಸಿಕೊಳ್ಳುತ್ತಿದೆ. ಯೋಜನೆ ಜಾರಿಯಲ್ಲಿರುವ ಸಮಸ್ಯೆಗಳು, ಅದರಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ಹಿನ್ನೆಲೆಯಲ್ಲಿ ಇದನ್ನು ಮೈತ್ರಿ ಸರ್ಕಾರ ಹೊಸದಾಗಿ ಜಾರಿಗೆ
ತರುತ್ತಿರುವ “ಮುಖ್ಯಮಂತ್ರಿ ಮಾತೃಶ್ರೀ’ಯೋಜನೆಯೊಂದಿಗೆ ವಿಲೀನಗೊಳಿಸಿ ಯೋಜನೆಯಲ್ಲಿ ಪರಿವರ್ತನೆ ಮಾಡಲು ಚಿಂತನೆ ನಡೆಸುತ್ತಿದೆ.

Advertisement

ಮಾತೃಪೂರ್ಣ ಯೋಜನೆಯಡಿ ಅಂಗನವಾಡಿಗಳಲ್ಲಿ ನೀಡುತ್ತಿರುವ ಪೌಷ್ಠಿಕಾಂಶಯುಕ್ತ ಬಿಸಿಯೂಟ ತಿನ್ನಲು ಗರ್ಭಿಣಿ, ಬಾಣಂತಿಯರು ಸರಿಯಾಗಿ ಬರುತ್ತಿಲ್ಲ. ಈ ಬಿಸಿಯೂಟವನ್ನು ಮನೆಗೆ ತಲುಪಿಸಲೂ ಸಾಧ್ಯವಾಗುತ್ತಿಲ್ಲ. ಆದರೆ, ಯೋಜನೆಗೆ ನಿಗದಿತ ವೆಚ್ಚ ಮಾತ್ರ ಆಗುತ್ತಿದೆ. ಹೀಗಾಗಿ ಈ ಯೋಜನೆಯನ್ನು ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಯಲ್ಲಿ ವಿಲೀನಗೊಳಿಸಿ ಫ‌ಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸುವ ಬಗ್ಗೆ ಪರಿಶೀಲಿಸುವಂತೆ ಸಿಎಂ ಕುಮಾರಸ್ವಾಮಿ ಆರ್ಥಿಕ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಸರ್ಕಾರದ ಯೋಜನೆ: ಗರ್ಭಿಣಿ, ಬಾಣಂತಿಯರು, ನವಜಾತ ಶಿಶುಗಳಲ್ಲಿ ಅಪೌಷ್ಠಿಕತೆ ನಿವಾರಣೆಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಮಧ್ಯಾಹ್ನ ಪೌಷ್ಠಿಕಾಂಶಯುಕ್ತ ಬಿಸಿಯೂಟ ನೀಡುವ ಸಲುವಾಗಿ ಈ ಯೋಜನೆಯನ್ನು ಹಿಂದಿನ ಸರ್ಕಾರ ಜಾರಿ ಮಾಡಿತ್ತು. ಸುಮಾರು 66 ಸಾವಿರ ಅಂಗನವಾಡಿಗಳಲ್ಲಿ 2017ರ ಅ. 2ರಿಂದ ಯೋಜನೆ ಜಾರಿಯಾಗಿತ್ತು.

ಗರ್ಭಿಣಿಯರು ಹೆಸರು ನೋಂದಾಯಿಸಿದ ದಿನದಿಂದ ಹೆರಿಗೆಯಾದ ಆರು ತಿಂಗಳವರೆಗೆ ಇರುತ್ತದೆ. 8 ತಿಂಗಳು ತುಂಬಿದ ಗರ್ಭಿಣಿಯರು ಮತ್ತು ಹೆರಿಗೆಯಾದ 45 ದಿನಗಳವರೆಗೆ ಮನೆಗಳಿಗೆ ಊಟ ತಲುಪಿಸುವ ವ್ಯವಸ್ಥೆಯೂ ಇದರಲ್ಲಿತ್ತು.ಆದರೆ, ಯೋಜನೆ ಜಾರಿಯಾದ ದಿನದಿಂದಲೇ ಈ ಬಗ್ಗೆ ಅಪಸ್ವರಗಳು ಕೇಳಿಬಂದಿದ್ದವು. 

ಅಧಿಕಾರಿಗಳ ಅಸಹಾಯಕತೆ: ಇತ್ತೀಚೆಗಷ್ಟೇ ಸಿಎಂ ಕುಮಾರಸ್ವಾಮಿ ಕರೆದಿದ್ದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಸಿಇಒಗಳ ಸಭೆಯಲ್ಲೂ ಅಧಿಕಾರಿ ಗಳು ಯೋಜನೆ ಜಾರಿ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿ ದ್ದರು. ಕೆಲವೆಡೆ
ಬಾಣಂತಿಯರು ಮೂರ್ನಾಲ್ಕು ತಿಂಗಳು ಮನೆ ಬಿಟ್ಟು ಹೊರಬಾರದ ಕಾರಣ ಅವರಿಗೆ ಸೌಲಭ್ಯ ತಲುಪುತ್ತಿಲ್ಲ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು. ಇದಕ್ಕೆ ಸಭೆಯಲ್ಲೇ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ
ಎಚ್‌.ಡಿ.ಕುಮಾರಸ್ವಾಮಿ, ಮಾತೃಪೂರ್ಣ ಯೋಜನೆ ಬೇಡ ಎಂದು ಅಂಗನವಾಡಿ ಕಾರ್ಯಕರ್ತೆಯರೇ ಹೇಳುತ್ತಿದ್ದಾರೆ. ಹೀಗಾಗಿ ಪೌಷ್ಠಿಕ ಆಹಾರದ ಬದಲು ಹಣ ಕೊಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದರು. ಅಲ್ಲದೆ, ಸಭೆ ಮುಗಿದ ಬಳಿಕ ಈ ಕುರಿತು ಪರಿಶೀಲಿಸುವಂತೆ ಹಣಕಾಸು ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಆರ್ಥಿಕವಾಗಿ ಅನುಕೂಲ
ಮಾತೃಪೂರ್ಣ ಯೋಜನೆ ಬದಲು ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ ಜಾರಿಗೆ ಬಂದರೆ ಗರ್ಭಿಣಿ ಬಾಣಂತಿಯರಿಗೆ ಆರ್ಥಿಕವಾಗಿ ಹೆಚ್ಚು ಅನುಕೂಲ ಸಿಗಲಿದೆ. ಈಗಾಗಲೇ ರಾಜ್ಯದಲ್ಲಿ ಕೇಂದ್ರ ಸರ್ಕಾರದ ಮಾತೃ ವಂದನಾ ಯೋಜನೆ ಜಾರಿಯಲ್ಲಿದೆ. ಈ ಯೋಜನೆಯಡಿ ಮೊದಲ ಬಾರಿ ಗರ್ಭಿಣಿಯಾದವರಿಗೆ 5 ಸಾವಿರ ರೂ. ನೀಡಲಾಗುತ್ತದೆ. ಹೆಸರು ನೋಂದಾಯಿಸಿದವರಿಗೆ ಮೊದಲ ಕಂತಿನಲ್ಲಿ ಒಂದು ಸಾವಿರ, ಆರು ತಿಂಗಳ ನಂತರ ಗರ್ಭಿಣಿಯ ಆರೋಗ್ಯ ತಪಾಸಣೆಯಾದ ಮೇಲೆ 2ನೇ ಕಂತಿನಲ್ಲಿ 2 ಸಾವಿರರೂ., ಮಗು ಜನನವಾಗಿ ಮೊದಲ ಹಂತದ ಚುಚ್ಚುಮದ್ದು ಹಾಕಿಸಿದ ಮೇಲೆ ಮೂರನೇ ಹಂತದ 2 ಸಾವಿರ ನೀಡಲಾಗುತ್ತದೆ. ಇದರ ಜತೆಗೆ ಜನನಿ ಸುರûಾ ಯೋಜನೆಯಿಂದಲೂ ಹೆಚ್ಚುವರಿಯಾಗಿ 1 ಸಾವಿರ ರೂ. ಸೇರಿ ಒಟ್ಟು ಆರು ಸಾವಿರ ರೂ. ಅವರಿಗೆ ಸಿಗುತ್ತದೆ. ಅದೇ ರೀತಿ ಮಾತೃಶ್ರೀ ಯೋಜನೆಯೂ ಜಾರಿಯಾದರೆ ಗರ್ಭಿಣಿಯರಿಗೆ ಪ್ರಸವ ಪೂರ್ವ ಮತ್ತು ನಂತರದಲ್ಲಿ ಕನಿಷ್ಠ 12 ಸಾವಿರ ರೂ. ಸಿಕ್ಕಂತಾಗುತ್ತದೆ. ಒಂದು ವೇಳೆ ಮಾತೃಶ್ರೀ ಯೋಜನೆಯ ಮೊತ್ತ ಹೆಚ್ಚಿಸಿದರೆ ಆರ್ಥಿಕ ನೆರವು ಇನ್ನೂ ಹೆಚ್ಚಾಗಲಿದೆ ಎಂಬ ಅಭಿಪ್ರಾಯ ಅಧಿಕಾರಿಗಳ ವಲಯದಿಂದ ಕೇಳಿಬಂದಿದೆ.

ಹೊಸ ಯೋಜನೆ ಹೇಗೆ? ಪ್ರಸವ ಪೂರ್ವದಲ್ಲಿ ಒಂದು ಸಾವಿರ ಮತ್ತು ಪ್ರಸವಾನಂತರ (ಬಾಣಂತಿಯರಿಗೆ) 3 ಸಾವಿರ ರೂ. ನೀಡುವ ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ ಜತೆಗೆ ಮಾತೃಪೂರ್ಣ ಯೋಜನೆಯನ್ನು ವಿಲೀನಗೊಳಿಸಿ ನೋಂದಣಿ ಮಾಡಿಸಿಕೊಂಡವರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾತೃಪೂರ್ಣ ಯೋಜನೆಗೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಲೆಕ್ಕ ಹಾಕಲು ಸೂಚಿಸಲಾಗಿದೆ. ಮಾತೃಪೂರ್ಣ ಯೋಜನೆ ಸ್ಥಗಿತದಿಂದ ಉಳಿತಾಯವಾಗುವ ವೆಚ್ಚವನ್ನು ಮಾತೃಶ್ರೀ ಯೋಜನೆಗೆ ಸೇರಿಸಿಕೊಂಡು ಈ ವರ್ಷದಿಂದಲೇ ಫ‌ಲಾನುಭವಿಗಳಿಗೆ ಆರು ತಿಂಗಳ ಅವಧಿಗೆ ನೀಡುವ ಮಾಸಿಕ 1000 ರೂ. ಅನ್ನು 2000 ರೂ.ಗೆ ಏರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ವರದಿ ನೀಡಿ ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next