Advertisement

ದೇಶದ ಜನರ ಕಷ್ಟ ಆಲಿಸಬೇಕಾದ ವಿಚಾರದಲ್ಲಿ ಮೋದಿ ಸಂಪೂರ್ಣ ವಿಫಲ: ಸಿದ್ದರಾಮಯ್ಯ ವಾಗ್ದಾಳಿ

09:58 AM Jan 04, 2020 | keerthan |

ಬೆಂಗಳೂರು: ದೇಶದ ಜನರ ಕಷ್ಟ ಆಲಿಸಬೇಕಾದ್ದು ಪ್ರಧಾನಿಯಾದವರ ಕರ್ತವ್ಯ. ಆದರೆ ಈ ವಿಚಾರದಲ್ಲಿ ನರೇಂದ್ರ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಶುಕ್ರವಾರ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಈ ಹಿಂದೆ ಕಂಡು ಕೇಳರಿಯದಂತಹ ಭೀಕರ ಪ್ರವಾಹ ಸಂಭವಿಸಿತ್ತು. ಪ್ರವಾಹದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ರಾಜ್ಯಕ್ಕೆ ಬರಲಿಲ್ಲ. ರಾಜ್ಯದ ಜನರು ಕಷ್ಟ, ನಷ್ಟಗಳಿಂದ ತತ್ತರಿಸಿದ್ದಾರೆ. ಪ್ರಧಾನಿಯವರು ಸಣ್ಣ ಸಣ್ಣ ವಿಷಯಗಳಿಗೂ ಟ್ವೀಟ್ ಮಾಡುತ್ತಾರೆ. ಹೀಗಿರುವಾಗ ರಾಜ್ಯಕ್ಕೆ ಬಗ್ಗೆ ಬರುವುದಿರಲಿ, ಟ್ವೀಟ್ ಮಾಡಬಹುದಾಗಿತ್ತು ಎಂದರು.

ಕಳೆದ 2009ರಲ್ಲಿ ಸಂಭವಿಸಿದ್ದ ಪ್ರವಾಹದ ವೇಳೆ ಮನವೋಹನ್ ಸಿಂಗ್ ಭೇಟಿ ನೀಡಿದ್ದರು. ಆಗಲೂ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಆಗ ಮನಮೋಹನ್ ಸಿಂಗ್ ವೈಮಾನಿಕ ಸಮೀಕ್ಷೆ ನಡೆಸಿ ಒಂದೂವರೆ ಸಾವಿರ ಕೋಟಿ ಮಧ್ಯಂತರ ಪರಿಹಾರ ನೀಡಿದರು. ಆದರೆ ಈ ಬಾರಿ ಪ್ರವಾಹದಿಂದ ಒಂದು ಲಕ್ಷಕ್ಕೂ ಹೆಚ್ಚು ಕೋಟಿ ನಷ್ಟವಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ‌ 38 ಸಾವಿರ ಕೋಟಿ ನಷ್ಟದ ವರದಿ ಕಳುಹಿಸಿತ್ತು. ಕೇಂದ್ರ ಆಗ ಕೊಟ್ಟಿದ್ದು ಕೇವರ 1200 ಕೋಟಿ ಮಾತ್ರ ಎಂದು ಟೀಕಿಸಿದರು.

ಚಂದ್ರಯಾನ ವೀಕ್ಷಣೆಗೆ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದರೂ ಯಾರ ಭೇಟಿಗೂ ಅವಕಾಶ ನೀಡಲಿಲ್ಲ. ಪ್ರವಾಹದ ಬಗ್ಗೆ ಸೌಜನ್ಯಕ್ಕಾದರೂ ಮಾತನಾಡ ಬಹುದಾಗಿತ್ತು ಅದನ್ನೂ ಮಾತನಾಡಲೇ ಇಲ್ಲ ಎಂದರು.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸಿದ್ದರಾಮಯ್ಯ, ಈ ಹಿಂದೆ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಏನೇನು ಭರವಸೆ ನೀಡಿದ್ದರು ಎಂಬುದನ್ನ ನೆನಪಿಸಿಕೊಳ್ಳಲಿ.  ಫುಡ್ ಪಾರ್ಕ್ ನಿಂದ ಸಾವಿರಾರು ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಅದ್ಯಾವುದೂ ಆಗಲೇ ಇಲ್ಲ. ಅದೆಲ್ಲ ಕೇವಲ ಹೇಳಿಕೆಗಳಿಗಷ್ಟೇ ಸೀಮಿತವಾಗಿದೆ ಎಂದರು.

Advertisement

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವಂತೆ ಕರ್ನಾಟಕದಲ್ಲೂ ಅದೇ ಸರ್ಕಾರ ಇದ್ದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಹಿಂದೆ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು. ಆದರೆ ರಾಜ್ಯ ಬಿಜೆಪಿ ನಾಯಕರಿಗೆ ಮೋದಿ ‌ಮನೆಯ ಬಾಗಿಲನ್ನೇ ತೆರೆಯಲಿಲ್ಲ ಎಂದು ಟೀಕಿಸಿದರು.

ನರೇಂದ್ರ ಮೋದಿ ಬಳಿ ಏನನ್ನೂ ಕೇಳಲು ಬಿಜೆಪಿ ನಾಯಕರು ಭಯ ಬೀಳುತ್ತಾರೆ. ಅದಕ್ಕೆ ಯಡಿಯೂರಪ್ಪ ದುರ್ಬಲ ಸಿಎಂ ಅಂತಾ ಹೇಳಿದ್ದೆ.  ನಿನ್ನೆ ತುಮಕೂರಿನಲ್ಲಿ ಯಡಿಯೂರಪ್ಪ ಪರಿಹಾರಕ್ಕೆ ಗೋಗರೆದಿದ್ದಾರೆ. ಇದಕ್ಕೆ ಮೋದಿ ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ಕನಿಷ್ಠ ಪಕ್ಷ ಪರಿಶೀಲಿಸುತ್ತೇನೆ ಅಂತಲಾದ್ರೂ ಹೇಳಬಹುದಾಗಿತ್ತು. ಯಾವುದಕ್ಕೂ ಪ್ರತಿಕ್ರಿಯೆಯನ್ನೇ ಕೊಟ್ಟಿಲ್ಲ. ಇದನ್ನೆಲ್ಲಾ ನೋಡಿದಾಗ ಮೋದಿಗೆ ಕರ್ನಾಟಕದ‌ ಬಗ್ಗೆ ಎಷ್ಟು ನಿರ್ಲಕ್ಷ್ಯ ಇದೆ ಎಂಬುದು ಗೊತ್ತಾಗುತ್ತೆ ಎಂದರು.

ಇಲ್ಲಿನ ಬಿಜೆಪಿ ನಾಯಕರು ನಮಗೆ ಓಟು ಕೊಡಬೇಡಿ ಮೋದಿಗೆ ಕೊಡಿ ಅಂತಿದ್ದರು. ರಾಜ್ಯದಿಂದ ಹೆಚ್ಷು ಸಂಸದರ‌ ಕಾರಣಕ್ಕಾದರೂ ಸ್ಪಂದಿಸಬೇಕಿತ್ತು. ಸಿದ್ದಗಂಗಾ ಮಠಕ್ಕೆ ಹೋಗಿ ರಾಜಕೀಯ ಭಾಷಣ ಮಾಡಿದ್ದಾರೆ. ಮಕ್ಕಳ ‌ಮುಂದೆ ಪಾಕಿಸ್ತಾನ, ಸಿಎಎ, ಎನ್ ಆರ್ ಸಿ ಬಗ್ಗೆ ಮಾತನಾಡುವುದು ಬೇಕಿತ್ತಾ ಎಂದು ಪ್ರಶ್ನಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಏನೂ ಮಾತನಾಡುತ್ತಿಲ್ಲ. ನಿರುದ್ಯೋಗ, ರೈತರ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ. ರೈತರ ಸಾಲಮನ್ನಾ ಮಾಡಿ ಅಂದರೆ ಮಾಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮಾತನ್ನಾಡ್ತಾರೆ. ಮಹದಾಯಿ ಸಮಸ್ಯೆ ಬಗೆಹರಿಸಲಿಲ್ಲ. ಮೋದಿ, ಯಡಿಯೂರಪ್ಪ, ಜಾವ್ಡೇಕರ್ ಎಲ್ಲರೂ ಸುಳ್ಳು ಹೇಳ್ತಾರೆ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next