ಬೆಂಗಳೂರು: ಸುಭದ್ರ ಕ್ಷೇತ್ರದ ಹುಡುಕಾಟದಲ್ಲಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಈಗ ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿ ಘೋಷಣೆ ವರವಾಗಿ ಪರಿಣಮಿಸಿದೆ.
ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಮುಂದಿನ ಬಾರಿ ವರುಣಾ ಕ್ಷೇತ್ರದಿಂದ ಕಣಕ್ಕೆ ಇಳಿಸಬೇಕೆಂಬ ಲೆಕ್ಕಾಚಾರವನ್ನು ಬಿಜೆಪಿಯ ಒಂದು ವರ್ಗ ನಡೆಸುತ್ತಿತ್ತು. ಆದರೆ ತಾವು ಪ್ರತಿನಿಧಿಸುತ್ತಿದ್ದ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ ಎಂದು ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಇನ್ನೊಂದೆಡೆ ಸಿದ್ದರಾಮಯ್ಯ ಪುತ್ರ ಯತೀಂದ್ರ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಲು ಸಿದ್ದ ಎಂದು ಕೆಲ ದಿನಗಳ ಹಿಂದೆ ಹೇಳಿದ್ದರು. ಹೀಗಾಗಿ ವಿಜಯೇಂದ್ರ ಶಿಕಾರಿಪುರ ಸ್ಪರ್ಧೆ ಸಿದ್ದರಾಮಯ್ಯ ಅವರನ್ನು ಬಹುತೇಕ ನಿರಾಳಗೊಳಿಸಿದೆ.
ಇದನ್ನೂ ಓದಿ:ನಾನೂ ಸಿಎಂ ಆಗ್ಬೇಕು.. .; ಕಾಂಗ್ರೆಸ್ ಗೆ ತುಟ್ಟಿಯಾಗುತ್ತಿದೆಯೇ ಸಿಎಂ ಆಕಾಂಕ್ಷಿಗಳ ಪಟ್ಟಿ
ಸಿದ್ದರಾಮಯ್ಯ ಹಾಲಿ ಪ್ರತಿನಿಧಿಸುತ್ತಿರುವ ಬಾದಾಮಿ, ನೆಚ್ಚಿನ ಕ್ಷೇತ್ರ ಚಾಮುಂಡೇಶ್ವರಿ, ಚಾಮರಾಜಪೇಟೆ, ಕೋಲಾರ, ಕೊಪ್ಪಳ ಸೇರಿದಂತೆ ಎಲ್ಲಿಯೂ ಸಿದ್ದರಾಮಯ್ಯ ಅವರಿಗೆ ಅನುಕೂಲಕರ ವಾತಾವರಣ ಇರಲಿಲ್ಲ. ವರುಣಾದಲ್ಲಿ ಸ್ಪರ್ಧಿಸಿದ್ದರೆ ಅಲ್ಲಿ ವಿಜಯೇಂದ್ರ ಸ್ಪರ್ಧೆಯಿಂದ ಬಿಗುವಿನ ವಾತಾವರಣ ನಿರ್ಮಾಣವಾಗಬಹುದೆಂಬ ಆತಂಕವಿತ್ತು. ಈಗ ವಿಜಯೇಂದ್ರ ಶಿಕಾರಿಪುರದಲ್ಲಿ ನಿಲ್ಲುವುದು ಖಾತ್ರಿಯಾಗಿರುವುದರಿಂದ ಸಿದ್ದರಾಮಯ್ಯ ಅವರಿಗೆ ಕೊನೆಗೂ ಒಂದು ಗಟ್ಟಿ ಕ್ಷೇತ್ರ ಸಿಕ್ಕಂತಾಗಿದೆ.