Advertisement

ಕಾಂಗ್ರೆಸ್‌ ಗಟ್ಟಿಗೊಳಿಸುವರೇ ಸಿದ್ದರಾಮಯ್ಯ?

09:44 AM Jun 28, 2019 | Team Udayavani |

ಬಾಗಲಕೋಟೆ: ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಮುಗ್ಗರಿಸಿರುವ ಕಾಂಗ್ರೆಸ್‌ ಪಕ್ಷಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪುನಶ್ಚೇತನ ಕೊಡುವರೇ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿದೆ.

Advertisement

ಹೌದು, ಲೋಕಸಭೆ ಚುನಾವಣೆಯ ಬಳಿಕ ಸೋಲಿನ ಅವಲೋಕನ ಹಾಗೂ ಮುಂದೆ ಪಕ್ಷ ಸಂಘಟನೆಯ ಜವಾಬ್ದಾರಿ, ಕರ್ತವ್ಯಗಳ ಕುರಿತು ಮಹತ್ವದ ಸಭೆ ನಡೆಯಲಿದೆ ಎಂಬ ಆಶಾಭಾವನೆ ಪಕ್ಷದ ಹಲವು ಇಟ್ಟುಕೊಂಡಿದ್ದರು. ಚುನಾವಣೆ ಮುಗಿದು ತಿಂಗಳಾದರೂ ಯಾವುದೇ ಸಭೆ ನಡೆದಿಲ್ಲ. ಪಕ್ಷ ಸೋಲಲು ಎಲ್ಲಿ, ಏನು ಕಾರಣ ಎಂಬ ಅವಲೋಕನ ಮಾಡಿಲ್ಲ. ಯಾರೂ, ಪಕ್ಷದ ಕೆಲಸ- ಕಾರ್ಯಗಳನ್ನು ಜವಾಬ್ದಾರಿಯಿಂದ ಮಾಡುತ್ತಿಲ್ಲ ಎಂಬ ಅಸಮಾಧಾನ ಹಲವರಲ್ಲಿ ಮನೆ ಮಾಡಿದೆ.

ವಿಜಿಟಿಂಗ್‌ ಕಾರ್ಡ್‌ಗೆ ಸೀಮಿತ !: ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸಹಿತ ಇಬ್ಬರು ಶಾಸಕರು ಮಾತ್ರ ಕಾಂಗ್ರೆಸ್‌ನಲ್ಲಿದ್ದಾರೆ. ಎರಡು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲೂ ಕಾಂಗ್ರೆಸ್‌ನ ಎಂಎಲ್ಸಿಗಳಿದ್ದಾರೆ. ಇನ್ನು ನಾಮ ನಿರ್ದೇಶಿತ ಎಂಎಲ್ಸಿ ಸಕ್ಕರೆ ಸಚಿವರಾಗಿದ್ದಾರೆ. ಪಕ್ಕದ ವಿಜಯಪುರ ಜಿಲ್ಲೆಯ ಶಿವಾನಂದ ಪಾಟೀಲ, ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಇನ್ನು ಮಾಜಿ ಸಚಿವ ಎಚ್.ವೈ. ಮೇಟಿ, ಬಿಟಿಡಿಎ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಪಕ್ಷದಲ್ಲಿ ಪ್ರಮುಖ ಕಾರ್ಯಕರ್ತರಿಗಿಂತ ಹಲವು ನಾಯಕರೇ ಇದ್ದಾರೆ. ಆದರೆ, ಎಲ್ಲರೂ ಒಟ್ಟಿಗೆ ಕುಳಿತು, ಪಕ್ಷ ಸಂಘಟನೆ ಬಗ್ಗೆ ಗಂಭೀರ ಚರ್ಚೆ- ಚಿಂತನೆ ಮಾಡುತ್ತಿಲ್ಲ. ಪದಾಧಿಕಾರಿಗಳ ನೇಮಕಕ್ಕಾಗಿ ಪೈಪೋಟಿ ನಡೆಸುವವರು, ಕೇವಲ ವಿಜಿಟಿಂಗ್‌ ಕಾರ್ಡ್‌ ಮಾಡಿಕೊಂಡಿದ್ದಾರೆ ಹೊರತು, ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿಲ್ಲ. ಪಕ್ಷಕ್ಕಾಗಿ ದುಡಿಯುವವರಿಗೆ ಜವಾಬ್ದಾರಿ ಸಿಗುತ್ತಿಲ್ಲ ಎಂಬ ಅಸಮಾಧಾನ ಬಹುತೇಕ ಕಾಂಗ್ರೆಸ್ಸಿಗರಲ್ಲಿದೆ.

ಇಂತಹ ಹಲವು ಕಾರಣಗಳಿಂದ ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 1.60 ಲಕ್ಷ ಮತಗಳ ಅಂತರದಿಂದ ಸೋಲಬೇಕಾಯಿತು. ಉಸ್ತುವಾರಿ ಸಚಿವರು, ಲೋಕಸಭೆಚುನಾವಣೆ ವೇಳೆ ತೋರಿದ ಕಾಳಜಿ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೂ ತೋರಬೇಕೆಂಬ ಒತ್ತಾಯ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ.

ಪುನಶ್ಚೇತನ ಮಾಡುವರೆ?: ಮಾಜಿ ಸಿಎಂ ಸಿದ್ದರಾಮಯ್ಯ, ಬಾದಾಮಿ ಶಾಸಕರಾಗಿದ್ದಾರೆ. ರಾಜ್ಯ ಮಟ್ಟದ ಹಿರಿಯ ನಾಯಕರೊಬ್ಬರು ಜಿಲ್ಲೆಯ ಶಾಸಕರಾದರೂ, ಜಿಲ್ಲೆಯಲ್ಲಿ ಪಕ್ಷದ ನೆಲೆ ದಿನೇ ದಿನೇ ಕಡಿಮೆಗೊಳ್ಳುತ್ತಿದೆ ವಿನಃ ಗಟ್ಟಿಗೊಳ್ಳುತ್ತಿಲ್ಲ ಎಂಬುದು ಕಾಂಗ್ರೆಸ್ಸಿಗರ ಆತಂಕ. ಹೀಗಾಗಿ ಸಿದ್ದರಾಮಯ್ಯ ಅವರಾದರೂ ಜಿಲ್ಲೆಯಲ್ಲಿ ಪಕ್ಷ ಬಲಗೊಳಿಸಲು ಮುಂದಾಗುತ್ತಾರಾ ಎಂದು ಕಾರ್ಯಕರ್ತರು ಕಾದು ಕುಳಿತಿದ್ದಾರೆ.

Advertisement

ಲೋಕಸಭೆ ಚುನಾವಣೆ ಪ್ರಚಾರ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಎರಡು ದಿನಗಳ ಕಾಲ, ಮಾಜಿ ಸಿಎಂ ಸಿದ್ದರಾಮಯ್ಯ ಜಿಲ್ಲಾ ಕೇಂದ್ರವಾದ ಬಾಗಲಕೋಟೆಗೆ ಬರುತ್ತಿದ್ದಾರೆ. ಅವರ ಕನಸಿನ ಯೋಜನೆ ಇಂದಿರಾ ಕ್ಯಾಂಟಿನ್‌ ಉದ್ಘಾಟಿಸಲಿದ್ದಾರೆ. ಅದೇ ದಿನ ಪಕ್ಷದ ಪ್ರಮುಖರ, ಹಿರಿಯ ಕಾರ್ಯಕರ್ತರ ಸಭೆ ನಡೆಸಿ, ಸಂಘಟನೆಗೆ ಸಲಹೆ-ಸೂಚನೆ- ಮಾರ್ಗದರ್ಶನ ನೀಡಲಿದ್ದಾರೆ ಎಂಬ ಮಾತಿದ್ದು, ಇದಕ್ಕಾಗಿ ಈವರೆಗೆ ಸಭೆ ನಿರ್ಧಾರವಾಗಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ಸಿಗರ ಸಭೆ ನಡೆಸುತ್ತಾರಾ? ಇಲ್ವಾ ಎಂಬ ಗೊಂದಲವೂ ಕಾಂಗ್ರೆಸ್‌ನಲ್ಲಿದೆ.

ಜಿಲ್ಲಾ ಘಟಕ ಪುನರ್‌ರಚನೆ ಆಗುತ್ತಾ?: ಪಕ್ಷದ ಹಾಲಿ ಅಧ್ಯಕ್ಷ ಎಂ.ಬಿ. ಸೌದಾಗರ, ಕಳೆದ 10 ವರ್ಷಗಳಿಂದ ಪಕ್ಷದ ಕೆಲಸದಲ್ಲಿ ತೊಡಗಿದ್ದು, ಅವರನ್ನು ಬದಲಾಯಿಸಿ, ಬೇರೋಬ್ಬರಿಗೆ ಅವಕಾಶ ಕೊಡಬೇಕು ಎಂಬ ಬೇಡಿಕೆ ಒಂದೆಡೆ ಕೇಳಿ ಬಂದಿದೆ. ಇನ್ನೊಂದೆಡೆ ಅವರು ಅಲ್ಪ ಸಂಖ್ಯಾತರ ಪ್ರಮುಖರಾಗಿದ್ದು, ಅವರಿಗೆ ಬೇರೆ ಜವಾಬ್ದಾರಿ ಅಥವಾ ಹುದ್ದೆ ನೀಡಿ, ಜಿಲ್ಲಾ ಘಟಕ ಪುನರ್‌ರಚನೆ ಮಾಡಬೇಕು ಎಂಬ ಒತ್ತಾಯ, ಸೌದಾಗರರ ಬೆಂಬಲಿಗರಿಂದ ಕೇಳಿ ಬಂದಿದೆ.

ಜಿಲ್ಲಾ ಘಟಕ ಪುನರ್‌ರಚನೆಯಾದರೆ ಮಾಜಿ ಶಾಸಕ ಎಸ್‌.ಜಿ. ನಂಜಯ್ಯನಮಠ, ಜಿ.ಪಂ. ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಕೈ ಮಗ್ಗ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಕಲಬುರಗಿ, ಡಾ|ದೇವರಾಜ ಪಾಟೀಲ, ಯುವ ಕಾಂಗ್ರೆಸ್‌ನಿಂದಲೂ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿರುವ ಮಂಜುನಾಥ ವಾಸನದ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹದ್ಲಿ, ಅನೀಲಕುಮಾರ ದಡ್ಡಿ ಮುಂತಾದವರ ಹೆಸರು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿವೆ. ಆದರೆ, ಜಿಲ್ಲಾ ಘಟಕದ ಪುನರ್‌ರಚನೆ ಕುರಿತು ಈ ವರೆಗೆ ಯಾವುದೇ ಚರ್ಚೆ ಅಥವಾ ಕೆಪಿಸಿಸಿಯಿಂದ ನಿರ್ದೇಶನ ಬಂದಿಲ್ಲ ಎನ್ನಲಾಗಿದೆ. ಜಿಲ್ಲೆಯಲ್ಲಿ ಬಲ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌ಗೆ ಪುನಶ್ಚೇತನ ಯಾವಾಗ ಎಂಬ ನಿರೀಕ್ಷೆ ಕಾಂಗ್ರೆಸಿಗರು ಇಟ್ಟುಕೊಂಡಿದ್ದಾರೆ.

 

•ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next