Advertisement

ಮುಂದಿನ ಚುನಾವಣೆಗೆ ಸಿದ್ದರಾಮಯ್ಯ ನೇತೃತ್ವ

04:47 PM Oct 15, 2017 | |

ಕೋಲಾರ: ಮುಂದಿನ ಚುನಾವಣೆಯ ಅಶ್ವಮೇಧವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಅದೃಷ್ಟ ತಂದಿರುವ ಕೋಲಾರದಿಂದ ಆರಂಭಿಸಲಾಗುತ್ತಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಘೋಷಿಸಿದರು.

Advertisement

ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ 2018 ರ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿ ಶುಕ್ರವಾರ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿದ್ದ ಕಾರ್ಯಕರ್ತರ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಉತ್ತಮ ಪ್ರತಿಕ್ರಿಯೆ: ಮುಂದಿನ ಚುನಾವಣೆಗಾಗಿ ರಾಜ್ಯದ ಕಾಂಗ್ರೆಸ್‌ ಸರಕಾರ ಮತ್ತು ಕೆಪಿಸಿಸಿ ಉತ್ತಮವಾಗಿ ಸಿದ್ಧತೆ ನಡೆಸಿವೆ. ಕಾಂಗ್ರೆಸ್‌ ಸರಕಾರದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯುತ್ತಮ ಯೋಜನೆಗಳನ್ನು ಬಡವರಿಗೆ ನೀಡಿದ್ದರೆ, ಜಿ.ಪರಮೇಶ್ವರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷದ ಸಂಘಟನೆ ಬೂತ್‌ ಮಟ್ಟದಿಂದ ಕೆಪಿಸಿಸಿ ವರೆಗೂ ಬಲಿಷ್ಟವಾಗಿದೆ. ಮನೆ ಮನೆ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬಿಜೆಪಿಗೆ ಸವಾಲು: ಕಳೆದ ನಾಲ್ಕೂವರೆ ವರ್ಷದಲ್ಲಿ ಸಿದ್ದರಾಮಯ್ಯ ಸರಕಾರ ಬಡವರು, ದಲಿತ, ಹಿಂದುಳಿದ ಅಲ್ಪಸಂಖ್ಯಾತ ಪರವಾದ ಅದ್ಭುತ ಯೋಜನೆಗಳನ್ನು ನೀಡಿದೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮೂರೂವರೆ ವರ್ಷಗಳ ಆಡಳಿತದಲ್ಲಿ ಶ್ರೀಮಂತರ ಪರವಾದ ಯೋಜನೆಗಳನ್ನು ರೂಪಿಸಿ ಬಡವರನ್ನು
ನಿರ್ಲಕ್ಷಿಸುತ್ತಿದೆ. ಈ ಬಗ್ಗೆ ಬಿಜೆಪಿಯೊಂದಿಗೆ ಬಹಿರಂಗ ಚರ್ಚೆಗೆ ಕಾಂಗ್ರೆಸ್‌ ಸಿದ್ಧವಿದೆ ಎಂದು ಪ್ರಕಟಿಸಿದರು.

ಕೇಂದ್ರದ ವಿರುದ್ಧ ಬಿಜೆಪಿಯವರಿಂದಲೇ ಟೀಕೆ: ಬೆಲೆ ಏರಿಕೆ, ಇಂಧನ ಬೆಲೆಯಲ್ಲಿ ನಿಯಮಿತ ಹೆಚ್ಚಳ, ಅನಿರೀಕ್ಷಿತ ಆರ್ಥಿಕ ನೀತಿಗಳಿಂದಾಗಿ ಉಲ್ಬಣಗೊಂಡಿರುವ ನಿರುದ್ಯೋಗ ಸಮಸ್ಯೆ ಕುರಿತಂತೆ ಕಾಂಗ್ರೆಸ್‌ ಪಕ್ಷ ಟೀಕಿಸುತ್ತಿಲ್ಲ. ಬಿಜೆಪಿ ಮುಖಂಡರಾದ ಯಶವಂತ್‌ ಸಿನ್ಹಾ, ಶತ್ರುಘ್ನ ಸಿನ್ಹಾ, ಸುಬ್ರಮಣಿಯನ್‌ ಸ್ವಾಮಿ ಮತ್ತು ಬಿಜೆಪಿ ಸಂಸದರೇ ಟೀಕಿಸುತ್ತಿದ್ದಾರೆಂದು ಹೇಳಿದರು. ಭ್ರಷ್ಟಾಚಾರ ರಹಿತವಾದ ಆಡಳಿತ ನೀಡುವುದಾಗಿ ಹೇಳಿ ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಪುತ್ರನ ಭ್ರಷ್ಟಾಚಾರದ ಬಗ್ಗೆ ಮೌನಕ್ಕೆ ಶರಣಾಗಿದ್ದಾರೆಂದು ಟೀಕಿಸಿದರು. 

Advertisement

28 ಮಂದಿ ಕೊಲೆ: ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಕೋಮುವಾದದಿಂದ ದೇಶವನ್ನು ಇಬ್ಭಾಗ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಬಗ್ಗೆ ಅಭಿಪ್ರಾಯ ಭೇದ ವ್ಯಕ್ತಪಡಿಸಿದ 28 ಮಂದಿಯನ್ನು ದೇಶಾದ್ಯಂತ ಕೊಲ್ಲಲಾಗಿದೆ. ಇವರಾರೂ ಕ್ರಿಮಿನಲ್‌ಗ‌ಳಲ್ಲ. ಸಾಹಿತಿ, ಪತ್ರಕರ್ತರು, ಚಿಂತಕರಾಗಿದ್ದರೆಂದ ಅವರು, ಇದ್ಯಾವುದರ ಬಗ್ಗೆಯೂ ಚಕಾರವೆತ್ತದ ಮೋದಿ ಕೇವಲ ಭಾಷಣ ಮಾಡುತ್ತಿದ್ದಾರೆಂದು ಟೀಕಿಸಿದರು. 

ಆರೋಗ್ಯ ಯೋಜನೆಗೆ ಅಭಿನಂದನೆ: ಇಡೀ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನವೆಂಬರ್‌ 1 ರಿಂದ ಕರ್ನಾಟಕದ ಎಲ್ಲಾ ಕುಟುಂಬಗಳಿಗೆ ಸರಕಾರಿ ಮತ್ತು ಇನ್ನಿತರ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಸಿಗುವಂತ ಯೋಜನೆಯನ್ನು ರೂಪಿಸಿ, ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆಗಳ ಸುಧಾರಣೆ ಮಾಡಿರುವ ಆರೋಗ್ಯ ಸಚಿವ ಕೆ.ಆರ್‌. ರಮೇಶ್‌ಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು.

ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ: ರಾಜ್ಯದಲ್ಲಿ ಎಲ್ಲಾ ವರ್ಗದ ಜನರನ್ನು ಉತ್ತಮ ಯೋಜನೆಗಳ ಮೂಲಕ ಒಗ್ಗೂಡಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರಕಾರ 2018 ಏಪ್ರಿಲ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಶತಃಸಿದ್ಧ ಎಂದು ಘೋಷಿಸಿದರು.

ಎಲ್ಲರೂ ಒಗ್ಗೂಡಿ ಕೆಲಸ ಮಾಡಿ: ಕೋಲಾರ ಜಿಲ್ಲೆಯಲ್ಲಿರುವ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರೇ ಆಯ್ಕೆಯಾಗುವಂತೆ ಮಾಡುವ ಶಕ್ತಿ ಸಾಮರ್ಥ್ಯ ಜಿಲ್ಲೆಯ ಮುಖಂಡರಲ್ಲಿದೆ, ಬಡವರ ಸೇವೆಗೆ, ದೇಶ ರಕ್ಷಣೆಗೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಇದಕ್ಕಾಗಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು, ಮುಖಂಡರು ಒಗ್ಗೂಡಬೇಕೆಂದರು. ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌, ಸಚಿವರಾದ ಡಿ.ಕೆ.ಶಿವಕುಮಾರ್‌, ರಮೇಶ್‌ಕುಮಾರ್‌, ಎಚ್‌.ಸಿ.ಮಹದೇವಪ್ಪ, ಸಂಸದ ಕೆ.ಎಚ್‌.ಮುನಿಯಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next