ಚಿತ್ರದುರ್ಗ : ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೈಕೋರ್ಟ್ ನೀಡಿರುವುದು ನಿರೀಕ್ಷಿತ ಆದೇಶ, ತಪ್ಪು ಮಾಡಿದ್ದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ಬುಧವಾರ(ಸೆ25)ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ. ಆದರೆ ಭಂಡತನದಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಬೇರೆಯವರ ಮೇಲೆ ಬೊಟ್ಟು ಮಾಡಿ ತೋರುತ್ತಿದ್ದಾರೆ.ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಕೌಟುಂಬಿಕ ಲಾಭಕ್ಕೆ, ಸ್ವಾರ್ಥಕ್ಕೆ ಬಲಿಯಾದ ಸಿಎಂ ಸಿದ್ದರಾಮಯ್ಯ” ಎಂದು ಕಿಡಿ ಕಾರಿದರು.
‘ಸಿಎಂ ಸ್ಥಾನಕ್ಕೆ ಕೂಡಲೇ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಪಕ್ಷವೇ ಜಾರಿಗೆ ತಂದ ಪಾರದರ್ಶಕ ಕಾಯ್ದೆಯಲ್ಲಿ ಅವರೇ ಸಿಲುಕಿದ್ದಾರೆ.ಕಾನೂನು ಕ್ರಮವನ್ನ ಅವರೇ ಎದುರಿಸುವ ಸ್ಥಿತಿ ಬಂದಿದೆ. ಮಾಹಿತಿ ಹಕ್ಕು ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕಂತ ಜಯವಾಗಿದ್ದು, ಈಗಾಗಲೇ ಸಾಕಷ್ಟು ವಿಳಂಬ ಆಗಿದೆ. ಸಿದ್ದರಾಮಯ್ಯ ಅವರು ಗೌರವದಿಂದ ರಾಜೀನಾಮೆ ನೀಡಬೇಕು’ ಎಂದರು.
”ರಾಜ್ಯದಲ್ಲಿ ಅಪಾದನೆ ಬಳಿಕ ಸಾಕಷ್ಟು ಮಂದಿ ರಾಜೀನಾಮೆ ಕೊಟ್ಟ ಉದಾಹರಣೆ ಇದೆ. ರಾಮಕೃಷ್ಣ ಹೆಗಡೆ ಟೆಲಿಫೋನ್ ಕದ್ದಾಲಿಕೆ ಅಪಾದನೆ ಬಂದಾಗ ನೇರವಾಗಿ ಬಂದು ರಾಜೀನಾಮೆ ಕೊಟ್ಟರು. ಸಿದ್ದರಾಮಯ್ಯ ಅವರು ರಾಮಕೃಷ್ಣ ಹೆಗ್ಡೆ ಗರಡಿಯಲ್ಲೇ ಬೆಳೆದವರು.ರಾಮಕೃಷ್ಣ ಹೆಗಡೆ ಅವರನ್ನ ಸಿದ್ದರಾಮಯ್ಯ ಒಮ್ಮೆ ನೆನಪು ಮಾಡಿಕೊಳ್ಳಬೇಕು. ಈ ದೇಶದ ಪ್ರಧಾನಿ ಆಗಿದ್ದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೆ ಅಪಘಾತ ಆದಾಗ ರಾಜೀನಾಮೆ ಕೊಟ್ಟವರು” ಎಂದರು.
”ಸಿದ್ದರಾಮಯ್ಯ ಅವರದ್ದು ಒಂದೇ ಹಗರಣ ಅಲ್ಲ, ಮುಡಾ ಮುಗಿಯಿತು ಮುಂದೆ ವಾಲ್ಮೀಕಿ ಹಗರಣ ಇದೆ’ ಎಂದರು.