ಚಿಕ್ಕಬಳ್ಳಾಪುರ: ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಮರ್ಥರು ಎಂದು ಹೇಳಿರುವ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಅವರು ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ರಾಜ್ಯದ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವರ್ಚಸ್ಸು ಇದೆ. ಮುಖ್ಯಮಂತ್ರಿಯಾಗಿ ಜನಪರವಾಗಿ ಕೆಲಸ ಮಾಡಿದ್ದಾರೆ. ಆಗಾಗಿ ವಿಪಕ್ಷ ಸ್ಥಾನಕ್ಕೆ ಅವರು ಸಮರ್ಥವಾಗಿದ್ದಾರೆ ಎಂದರು.
ಸದ್ಯಕ್ಕೆ ಸಿದ್ದರಾಮಯ್ಯ, ಹೆಚ್.ಕೆ.ಪಾಟೀಲ್, ಪರಮೇಶ್ವರ ನಡುವೆ ವಿಪಕ್ಷ ಸ್ಥಾನಕ್ಕೆ ಪೈಪೋಟಿ ಇದೆ. ಆದರೆ ಪಕ್ಷದ ಹಿತದೃಷ್ಟಿಯಿಂದ ಹಾಗೂ ಆಡಳಿತ ಪಕ್ಷವನ್ನು ಸಮರ್ಥವಾಗಿ ಎದುರಿಸಲು ಸಿದ್ದರಾಮಯ್ಯ ಸೂಕ್ತ. ಈ ಹಿಂದೆಯೂ ಅವರು ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ ಎಂದರು. ಹಾಗಂತ ಹೆಚ್.ಕೆ. ಪಾಟೀಲ್. ಪರಮೇಶ್ವರ್ ಕೂಡ ಪಕ್ಷದ ಸಂಘಟನೆ ಜವಾಬ್ದಾರಿ ನೀಡಿ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸ ಬೇಕಿದೆ ಎಂದರು.
ಕೆ.ಎಚ್.ಮುನಿಯಪ್ಪಗೆ ಶಿವಶಂಕರರೆಡ್ಡಿ ಟಾಂಗ್:
ಕಾಂಗ್ರೆಸ್ ಪಕ್ಷದಲ್ಲಿ ವಿರೋಧ ಪಕ್ಷ ನಾಯಕ ವಿಚಾರದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕೆ ನಾಯಕರು ಅನಿವಾರ್ಯ ಅಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಶಂಕರರೆಡ್ಡಿ, ಅದು ಇಂದಿರಾಗಾಂಧಿ ಕಾಲಕ್ಕೆ ಹೋಯಿತು. ಈಗ ಪಕ್ಚಕ್ಕೆ ಸಮರ್ಥ ನಾಯಕರು ಅಗತ್ಯ ಎಂದು ಮುನಿಯಪ್ಪ ಹೇಳಿಕೆಗೆ ತಿರುಗೇಟು ನೀಡಿದರು.
ಉಪ ಚುನಾವಣೆಯಲ್ಲಿ 12 ಸ್ಥಾನ
ರಾಜ್ಯದ 17 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಚಿಕ್ಕಬಳ್ಳಾಪುರ ಕ್ಷೇತ್ರ ಒಳಗೊಂಡಂತೆ 12 ರಿಂದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದರು. ರಾಜ್ಯದಲ್ಲಿ ಬಿಜೆಪಿ ಶಕ್ತಿ ಕುಸಿಯುತ್ತಿದ್ದು, ರಾಜ್ಯದಲ್ಲಿ ಉಲ್ಬಣಿಸಿರುವ ಬರ ಹಾಗೂ ನೆರೆಗೆ ಪರಿಹಾರ ಒದಗಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದರು.