ನವದೆಹಲಿ: ಭಾರತೀಯ ಜನತಾ ಪಕ್ಷ ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡಿದೆಯೇ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಶ್ನೆಗೆ ಬಿಜೆಪಿ ಸಂಸದ ವಿನಯ್ ಕಟಿಯಾರ್ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ಹಿಂದೂ ವಿರೋಧಿ, ಟಿಪ್ಪು ಸುಲ್ತಾನ್ ಆರಾಧಕ ಎಂದು ತಿರುಗೇಟು ನೀಡಿದ್ದಾರೆ.
ಯಾರು ಟಿಪ್ಪು ಸುಲ್ತಾನ್ ನನ್ನು ಆರಾಧಿಸುತ್ತಾರೋ ಅವರು ಹಿಂದೂಗಳನ್ನು ಬೆಂಬಲಿಸುವುದಿಲ್ಲ ಎಂದು ಕಟಿಯಾರ್ ತಿಳಿಸಿದ್ದಾರೆ.
ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಆರಾಧಕರೊಬ್ಬರು, ಈ ಕಾರಣದಿಂದಾಗಿ ಹಿಂದೂ ಸಮುದಾಯಕ್ಕೆ ಬಹಳಷ್ಟು ತೊಂದರೆಯಾಗಿದೆ. ಇದು ಸಹಜವಾದದ್ದು ಯಾಕೆಂದರೆ ಇಂತಹ ವ್ಯಕ್ತಿಗಳು ಹಿಂದೂಗಳ ಅಥವಾ ಹಿಂದೂಧರ್ಮವನ್ನು ಬೆಂಬಲಿಸುವುದಾಗಲಿ, ಶ್ರೇಯೋಭಿವೃದ್ಧಿ ಬಗ್ಗೆ ಚಿಂತಿಸಲ್ಲ ಎಂದು ಹೇಳಿರುವುದಾಗಿ ಎಎನ್ ಐ ವರದಿ ತಿಳಿಸಿದೆ.
ಕಳೆದ ವಾರ ಹುಬ್ಬಳ್ಳಿಯ ಬಿಜೆಪಿ ಪರಿವರ್ತನಾ ರಾಲಿಯಲ್ಲಿ ಭಾಗವಹಿಸಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಾತನಾಡುತ್ತ, ಕರ್ನಾಟಕ ಹನುಮನ ನಾಡು, ಆದರೆ ಅದನ್ನು ಟಿಪ್ಪು ಸುಲ್ತಾನ್ ಆರಾಧಕರು ಟಿಪ್ಪು ಭೂಮಿಯನ್ನಾಗಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯನವರು, ಹಿಂದೂತ್ವವನ್ನು ಬಿಜೆಪಿಯವರು ಗುತ್ತಿಗೆಗೆ ತೆಗೆದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದ್ದರು.