Advertisement

ಭಾವನಾತ್ಮಕ ಮತ ಬೇಟೆಗಿಳಿದ ಸಿದ್ದರಾಮಯ್ಯ

06:00 AM Oct 28, 2018 | Team Udayavani |

ಬಾಗಲಕೋಟೆ: ಜಮಖಂಡಿ ಉಪ ಚುನಾವಣೆ ಕಣ ರಂಗೇರುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ, ಭಾವನಾತ್ಮಕ ಭಾಷಣದ ಮೂಲಕ ಕಾಂಗ್ರೆಸ್‌ ಗೆಲ್ಲಿಸಲು ಮನವಿ ಮಾಡತೊಡಗಿದ್ದಾರೆ. ಕಳೆದೆರಡು ದಿನಗಳಿಂದ ಜಮಖಂಡಿ ಹಾಗೂ ಸಾವಳಗಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿರುವ ಸಿದ್ದರಾಮಯ್ಯ, ಜಮಖಂಡಿಯ ಶಾಸಕರಾಗಿದ್ದ ದಿ.ಸಿದ್ದು ನ್ಯಾಮಗೌಡರ ಸಾಧನೆ, ಬ್ಯಾರೇಜ್‌ ನಿರ್ಮಾಣ, ಅವರ ನಿಧನದ ದಿನದಂದು ಜನರು ಹಾಕಿದ ಕಣ್ಣೀರು ನೆನಪಿಸುತ್ತಾ ಮತ ಕೇಳುತ್ತಿದ್ದಾರೆ. ನಮಗೆ ರಾಜಕಾರಣದಲ್ಲಿ ಒಂದಷ್ಟು ವೈರಿಗಳಿದ್ದಾರೆ. ಆದರೆ, ಸಿದ್ದು ನ್ಯಾಮಗೌಡರಿಗೆ ವೈರಿಗಳೇ ಇರಲಿಲ್ಲ. ಜಮಖಂಡಿ ಕ್ಷೇತ್ರ ಇಂದು ಇಷ್ಟೊಂದು ನೀರಾವರಿ ಆಗಿದೆ ಎಂದರೆ ಅದಕ್ಕೆ ಸಿದ್ದು ನ್ಯಾಮಗೌಡ ಕಾರಣ. ನಾನು ಸಿಎಂ ಆಗಿದ್ದಾಗ ನೀರಾವರಿಗೆ 62 ಸಾವಿರ ಕೋಟಿ ರೂ. ಕೊಟ್ಟಿದ್ದೆ. ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಸದಾನಂದಗೌಡ ಅವರು ನೀರಾವರಿಗೆ ಇಷ್ಟೊಂದು ಹಣ ಕೊಟ್ರಾ. ಹಾಗಾದರೆ ಬಿಜೆಪಿಗೆ ಮತ ಏಕೆ ಹಾಕುತ್ತೀರಿ ಎಂದು ಜನರ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

Advertisement

ಆತ್ಮಕ್ಕೆ ಶಾಂತಿ ಸಿಗಲು ಮತ ಹಾಕಿ: ಸಿದ್ದು ನ್ಯಾಮಗೌಡ ನಿಧನರಾದಾಗ ನೀವೆಲ್ಲ ಏನೆಂದು ದುಃಖಪಟ್ರಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಬೇಡಿಕೊಂಡೀರಿ. ಸಿದ್ದು ನ್ಯಾಮಗೌಡರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರ ಮಗ ಆನಂದ ನ್ಯಾಮಗೌಡರನ್ನು ಗೆಲ್ಲಿಸಬೇಕು. ದಿ.ಸಿದ್ದು ನ್ಯಾಮಗೌಡರು ಇಡೀ ಕ್ಷೇತ್ರಕ್ಕಾಗಿ ಹಾಕಿಕೊಂಡಿದ್ದ ಯೋಜನೆಗಳು ಪೂರ್ಣಗೊಳ್ಳಬೇಕು. ಅವರು ಕಂಡ ಜಮಖಂಡಿ ಮಾದರಿ ಕ್ಷೇತ್ರವಾಗಬೇಕು. ಇದು ಅವರ ಪುತ್ರ ಆನಂದ ಅವರಿಂದ ಮಾತ್ರ ಸಾಧ್ಯ. ಆನಂದರನ್ನು ಕ್ಷೇತ್ರದ ಜನರು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಆಗ ದಿ.ಸಿದ್ದು ನ್ಯಾಮಗೌಡರ ಆತ್ಮಕ್ಕೆ ಶಾಂತಿ ಸಿಗ ಲಿದೆ ಎಂದು ಹೇಳುತ್ತ ಮತಬೇಟೆ ಮುಂದುವರಿಸಿದ್ದಾರೆ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡದಂತೆ ಬಿಜೆಪಿಯಲ್ಲೇ ಷಡ್ಯಂತ್ರ ನಡೆದಿದೆ. ಮುಂದೆ ಎಂದೂ ಅವರು ಸಿಎಂ ಆಗೋದಿಲ್ಲ. ಆಗಬಾರದು ಎಂಬ ಗುಂಪು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಸಿಎಂ ಆಗಲು ಯಡಿಯೂರಪ್ಪಗೆ ಬಹುಮತ ಇಲ್ಲ. ಅವರ ಪಕ್ಷಕ್ಕೂ ಬಹುಮತ ಇಲ್ಲ. ಆದರೂ ವ್ಯರ್ಥ್ಯ ಪ್ರಯತ್ನ ಮಾಡುತ್ತಿದ್ದಾರೆ.
● ಸಿದ್ದರಾಮಯ್ಯ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next