ಬಾದಾಮಿ ಪಟ್ಟಣದ ನ್ಯಾಯಾಲಯ ಪಕ್ಕದ ಹೋಟೆಲ್ ಮಯೂರ ಆವರಣದ ಮಲಪ್ರಭಾ ಬಲದಂಡೆ ಕಾಲುವೆ ಯೋಜನೆಯ ಪ್ರವಾಸಿ ಮಂದಿರದ ಸುಮಾರು ನಾಲ್ಕು ಕೋಣೆ, ಒಂದು ಹಾಲ್, ಅಡುಗೆ ಕೋಣೆ, ಕಂಪ್ಯೂಟರ್ ಕೋಣೆ, ದೇವರ ಕೋಣೆ ಒಳಗೊಂಡ ಆಧುನೀಕರಣಗೊಂಡ ಕಟ್ಟಡವನ್ನೇ ಶಾಸಕರ ಗೃಹ ಕಚೇರಿ ಮಾಡಲಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ ಅಂದಾಜು 25 ಲಕ್ಷ ರೂ.ಖರ್ಚು ಮಾಡಲಾಗಿದೆ. ಗುರುವಾರ ಮಧ್ಯಾಹ್ನ 3ರ ಸುಮಾರಿಗೆ ಸ್ವತಃ ಸಿದ್ದರಾಮಯ್ಯ ರಿಬ್ಬನ್ ಕತ್ತರಿಸುವ ಮೂಲಕ ಕಚೇರಿ ಉದ್ಘಾಟಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವರಾದ ಎಸ್.ಆರ್. ಪಾಟೀಲ, ಎಚ್.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಆರ್.ಬಿ. ತಿಮ್ಮಾಪುರ ಹಾಗೂ ಇತರರು ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.
Advertisement
ನೂತನ ಗೃಹ ಕಚೇರಿ ಉದ್ಘಾಟಿಸಿದ ಸಿದ್ದರಾಮಯ್ಯ, ಶೂ ಹಾಕಿಕೊಂಡೇ (ಎಲ್ಲರಿಗೂ ಶೂ, ಚಪ್ಪಲಿ ಹೊರ ಬಿಡಲು ಮನವಿ ಮಾಡಲಾಗಿತ್ತು) ಒಳ ಪ್ರವೇಶ ಮಾಡಿದರು. ಈ ವೇಳೆ ಅವರ ಆಪ್ತರು, “ಶೂ ಹೊರಗೆ ಬಿಡಿ ಸರ್’ ಎಂದು ಮನವಿ ಮಾಡಿದರು. ಆದರೂ, “ಮುಗಿತಲ್ಲಪ್ಪ, ಶೂ ಏಕೆ ಬಿಡಬೇಕು’ ಎನ್ನುತ್ತ ಒಳ ಬಂದರು. ವಿವಿಧ ಕೋಣೆ ಪರೀಕ್ಷಿಸಿದ ಬಳಿಕ, ದೇವರ ಕೋಣೆಗೆ ತೆರಳಿದರು. ಆಗ ಶೂ ತೆಗೆದು ದೇವರಿಗೆ ನಮಸ್ಕರಿಸಿದರು. ಬಳಿಕ ಶೂ ಹಾಕಿಕೊಳ್ಳಲು ಅವುಗಳತ್ತ ಬಂದಾಗ ಕಾರ್ಯಕರ್ತನೊಬ್ಬ ಶೂ ತೊಡಿಸಿದ. ಕಾರ್ಯಕರ್ತ ಶೂಗಳನ್ನು ಅವರ ಕಾಲಿನತ್ತ ತಂದು, ತೊಡಿಸುತ್ತಿದ್ದರೂ ಸಿದ್ದರಾಮಯ್ಯನವರು ಏನೂ ಮಾತನಾಡದೆ ಹಾಕಿಕೊಂಡು ಮುಂದಿನ ಕೋಣೆ ವೀಕ್ಷಣೆಗೆ ತೆರಳಿದರು.
ಕಚೇರಿಗೆ ಚಾಲನೆ ನೀಡಿದ ಬಳಿಕ ಪ್ರತಿಯೊಂದು ಕೋಣೆಯನ್ನೂ ಪರೀಕ್ಷಿಸಿದ ಸಿದ್ದರಾಮಯ್ಯ, ಬಾತ್ ರೂಂ ಎಲ್ಲಿ, ಹೇಗೆ ಮಾಡೀರಿ ಎಂದು ಕೋಣೆಯನ್ನು ಇಣುಕಿ ಪರೀಕ್ಷಿಸಿದರು. ಉದ್ಘಾಟನೆಗೂ ಮುನ್ನ ದೇವರ ಕೋಣೆಯಲ್ಲಿ ವಿಶ್ವಗುರು ಬಸವಣ್ಣ ಹಾಗೂ ಬಾದಾಮಿ ಬನಶಂಕರಿ ಫೋಟೋ ಇಟ್ಟು ವಿಶೇಷ ಪೂಜೆ ಮಾಡಲಾಗಿತ್ತು.