ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಹಠಕ್ಕೆ ಬಿದ್ದು ಕೈ ಪಾಲು ಮಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಮೈಸೂರಿನ ತಮ್ಮ ನಿವಾಸದಲ್ಲಿ ನಗರದ ಸ್ಥಳೀಯ ಮುಖಂಡರ ದಿಢೀರ್ ಸಭೆ ನಡೆಸಿದರು.
ಎರಡು ದಿನಗಳ ಹಿಂದಷ್ಟೇ ಹುಣಸೂರು, ಪಿರಿಯಾಪಟ್ಟಣ ಕ್ಷೇತ್ರಗಳ ಮಾಜಿ ಶಾಸಕರ ಜೊತೆ ಸಭೆ ನಡೆಸಿದ್ದ ಸಿದ್ದರಾಮಯ್ಯ ಅವರು ಭಾನುವಾರ, ಮೈಸೂರು ನಗರದ ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು ಅವರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಭಾವ್ಯ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಹಾಜರಿದ್ದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಭೆ ನಡೆಸುತ್ತಿದ್ದೇವೆ. ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಏನು ಮಾಡಬೇಕು ಎಂಬುದರ ಚರ್ಚೆ ನಡೆಸುತ್ತೇವೆ ಎಂದ ಅವರು, ಸಚಿವ ಸಾ.ರಾ.ಮಹೇಶ್ ಅವರು ಮೈತ್ರಿ ಪಕ್ಷಗಳು ಹೊಂದಾಣಿಕೆಯಿಂದ ಹೋಗಬೇಕು ಎಂಬ ಅರ್ಥದಲ್ಲಿ ಮಾತನಾಡಿರಬೇಕು. ಬಹುಶಃ ಆ ಅರ್ಥ ಬಿಟ್ಟು ಬೇರೇನೂ ಇಲ್ಲ ಎಂದು ಸಮರ್ಥಿಸಿಕೊಂಡರು.
ಸಂಭಾವ್ಯ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಮಾತನಾಡಿ, ಮದುವೆಯಾದ ಹೊಸದರಲ್ಲಿ ಗಂಡು-ಹೆಣ್ಣಿನ ನಡುವೆ ಶಾಸ್ತ್ರ, ಸಂಪ್ರದಾಯಗಳಲ್ಲಿ ಭಿನ್ನಾಭಿಪ್ರಾಯ ಬರುತ್ತೆ. ಹಾಗಂತ ಅವರು ಸಂಸಾರ ಮಾಡದೇ ಇರೋಕೆ ಆಗುತ್ತಾ.
ಇದು ಸಹ ಹಾಗೆಯೇ, ಅವರು ಎಲ್ಲಿ ಅಭ್ಯರ್ಥಿ ಹಾಕಿರುತ್ತಾರೋ ಅಲ್ಲಿ ನಮ್ಮ ಸಹಕಾರ ಬೇಕು, ಹಾಗೆಯೇ ನಮ್ಮ ಪಕ್ಷದ ಅಭ್ಯರ್ಥಿ ಇರುವ ಕಡೆ ಅವರು ಸಂಪೂರ್ಣ ಸಹಕಾರ ಕೊಡಬೇಕಾಗುತ್ತದೆ ಎಂದು ಸಚಿವ ಸಾ.ರಾ.ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಎರಡೂ ಪಕ್ಷಗಳೂ ಪ್ರಬಲವಾಗಿರುವುದೇ ಈ ರೀತಿಯ ಮಾತುಗಳಿಗೆ ಕಾರಣ,
ಎರಡೂ ಪಕ್ಷದ ನಾಯಕರು ಕುಳಿತು ಮಾತುಕತೆ ನಡೆಸಿ ಇಂಥದಕ್ಕೆಲ್ಲ ಇತಿಶ್ರೀ ಹಾಡುತ್ತಾರೆ ಎಂದರು. ಚುನಾವಣೆಗೆ ತಾವು ಈಗಾಗಲೇ ಸಕಲ ಸಿದ್ಧತೆ ನಡೆಸಿದ್ದು, 19ರಂದು ಅಭ್ಯರ್ಥಿ ಪಟ್ಟಿ ಅಂತಿಮವಾಗುವ ನಿರೀಕ್ಷೆ ಇದೆ ಎಂದರು. ಮಾಜಿ ಶಾಸಕ ವಾಸು ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ನಾನು ಈ ಭಾಗದ ಹಿರಿಯ ನಾಯಕ, ಹೀಗಾಗಿ ಈಗಲೂ ನಾನು ಟಿಕೆಟ್ ನೀರಿಕ್ಷೆಯಲ್ಲಿ ಇದ್ದೀನಿ.
ಕೊನೆಯವರೆಗೂ ಕೂಡ ಟಿಕೆಟ್‌ಗಾಗಿ ಕಾಯುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಬಂದ ಏಳು ಮಂದಿಗೆ ಟಿಕೆಟ್ ನೀಡಲಾಗಿತ್ತು. ಈವರೆಗೂ ಎ.ಮಂಜು ಕಾಂಗ್ರೆಸ್‌ನಲ್ಲಿದ್ದಾರೆ, ನಾಳೆ ಅವರಿಗೆ ಬಿಜೆಪಿ ಟಿಕೆಟ್ ಕೊಡಬಹುದು. ಹೀಗಾಗಿ ಹೊರಗಿನಿಂದ ಬಂದವರಿಗೆ ಟಿಕೆಟ್ ಎನ್ನುವ ವಿಚಾರ ಇಲ್ಲಿ ಪ್ರಸ್ತುತವಲ್ಲ ಎಂದು ತಿಳಿಸಿದರು.