Advertisement

ಶ್ರೀರಾಮುಲುಗೆ ಸಿದ್ದರಾಮಯ್ಯ ಕನ್ನಡ ಪಾಠ

10:08 AM Nov 01, 2018 | |

ಬಳ್ಳಾರಿ: ನಾನು ಲಕ್ಷ-ಪಕ್ಷ ಶಬ್ದವನ್ನು ಸರಿಯಾಗಿ ಉತ್ಛರಿಸಲ್ಲ ಎನ್ನುವ ಶಾಸಕ ಶ್ರೀರಾಮುಲು, “ಕ್ಷ’ ಅಕ್ಷರ ಪ್ರತ್ಯೇಕಾಕ್ಷರವೋ ಅಥವಾ ಸಂಯುಕ್ತಾಕ್ಷರವೋ ಎಂಬುದನ್ನು ಮೊದಲು ಹೇಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡುವ ಮೂಲಕ
ರಾಮುಲುಗೆ ಕನ್ನಡ ಪಾಠ ಮಾಡಿದ್ದಾರೆ. ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಶಾಸಕ ಶ್ರೀರಾಮುಲು ಅವರು, ಲಕ್ಷ-ಪಕ್ಷ ಎನ್ನುವ ಶಬ್ದವನ್ನು  ನನಗೆ ಉತ್ಛರಿಸಲು ಬರಲ್ಲ ಎಂದು ಬಹಿರಂಗ ಸಭೆಯೊಂದರಲ್ಲಿ ಹೇಳಿದ್ದಾರೆ. ಲಕ್ಷ-ಪಕ್ಷ ಶಬ್ದವನ್ನು 
ಸರಿಯಾಗಿ ಉತ್ಛರಿಸುವೆ. ಆದರೆ, ಶ್ರೀರಾಮುಲು ಅವರು “ಕ್ಷ’ ಎಂಬ ಅಕ್ಷರ ಪ್ರತ್ಯೇಕಾಕ್ಷರವೋ ಅಥವಾ ಸಂಯುಕ್ತಾಕ್ಷರವೋ ಎಂಬುದನ್ನು ಮೊದಲು ಹೇಳಲಿ. ಸ್ವರ, ವ್ಯಂಜನ, ಯೋಗವಾಹಕ, ಅನುಸ್ವಾರ, ಋಸ್ವಸ್ವರ, ದೀರ್ಘ‌ಸ್ವರ, ಅಲ್ಪಪ್ರಾಣ, ಮಹಾಪ್ರಾಣ ಅಂದರೆ ಏನು ಎಂಬುದು ಗೊತ್ತಾ? ಎಂದು ಪ್ರಶ್ನಿಸಿದರು.

Advertisement

ಕ್ಷ ಎಂದರೆ ಸಂಯುಕ್ತಾಕ್ಷರ. ಸಂಸದ, ಶಾಸಕರಾಗಲು ಇವೆಲ್ಲ ಅರ್ಹತೆಗಳಲ್ಲ. ಸಂಸತ್‌ ಸದಸ್ಯರಾಗುವವರಿಗೆ ಕ್ಷೇತ್ರವನ್ನು ಪ್ರತಿನಿಧಿಸುವ ಶಕ್ತಿ, ಸಾಮರ್ಥ್ಯ ಇರಬೇಕು. ಜಿಲ್ಲೆಯ ಆಶೋತ್ತರಗಳನ್ನು ಎತ್ತಿ ಹಿಡಿಯಬೇಕು. ಇದನ್ನು ರಾಮುಲು ಅರಿತುಕೊಳ್ಳಲಿ ಎಂದರು. ಈ ಹಿಂದೆ ಇವರದೇ ಪಕ್ಷದ ಇವರ ಆಪ್ತರ ಹಲವರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿದ್ದ ಹಿನ್ನೆಲೆಯಲ್ಲಿ ಶಾಸಕ ಬಿ.ಶ್ರೀರಾಮುಲು ಅವರಿಗೆ 371(ಜೆ) ಬಗ್ಗೆ ಗೊತ್ತಿಲ್ಲ. ಅವರಿಗೆ 420, 307, 323 ಐಪಿಸಿ ಸೆಕ್ಷನ್‌ ಬಗ್ಗೆ ಗೊತ್ತು ಎಂದು ಹೇಳಿದ್ದೆ. ಆದರೆ, ಶ್ರೀರಾಮುಲು ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದಿದ್ದಾರೆ. ಹಾಗಾದರೆ ಶಾಸಕ ಬಿ.ನಾಗೇಂದ್ರ, ಅಭ್ಯರ್ಥಿ ಉಗ್ರಪ್ಪ, ವೆಂಕಟೇಶ್‌ ಪ್ರಸಾದ್‌ ವಾಲ್ಮೀಕಿಗಳಲ್ಲವಾ? ನನ್ನ ಹೇಳಿಕೆಗೆ ಜಾತಿ ಬಣ್ಣ ಹಚ್ಚುತ್ತಿದ್ದಾರೆ. ಜಾತಿ ರಾಜಕಾರಣ ಮಾಡುವುದು
ಅತ್ಯಂತ ಕೀಳು ಮಟ್ಟದ ರಾಜಕಾರಣ. ವಾಲ್ಮೀಕಿ ಬಗ್ಗೆ ನನಗೆ ಗೊತ್ತಿರುವಷ್ಟು ಅವರಿಗೆ ಗೊತ್ತಿಲ್ಲ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ಶಾಸಕರ ಭವನದ ಬಳಿ ತಪೋವನ ನಿರ್ಮಿಸಿ ವಾಲ್ಮೀಕಿ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಅದಕ್ಕೆ ಅಭ್ಯರ್ಥಿ ಉಗ್ರಪ್ಪ ಕಾರಣ ಎಂದರು.

ಅಕ್ರಮ ಗಣಿಗಾರಿಕೆ ಮಾಡೇ ಇಲ್ಲ ಎನ್ನುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಜೈಲಿಗೆ ಏಕೆ ಹೋದರು? ಜೈಲಿಗೆ ಕಳಿಸೋದು ನಾನಲ್ಲ, ನ್ಯಾಯಾಧೀಶರು. ಅದೂ  ಸಾಕ್ಷ್ಯಾಧಾರಗಳು ಇಲ್ಲದೇ ಯಾವ ನ್ಯಾಯಾಧೀಶರೂ ಜೈಲಿಗೆ ಕಳಿಸಲ್ಲ. ಜನಾರ್ದನ ರೆಡ್ಡಿ ಹೇಳ್ಳೋದೆಲ್ಲ ಸುಳ್ಳು.
● ಸಿದ್ದರಾಮಯ್ಯ, ಮಾಜಿ ಸಿಎಂ.

ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ
ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ ನಲ್ಲಿ ತಾಂತ್ರಿಕ ದೋಷ ಕಂಡು ಬಂದು ಪ್ರವಾಸ ಮುಂದೂಡಿದ ಘಟನೆ ನಡೆದಿದೆ. ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರ ಮಾಧ್ಯಮ  ಸಮನ್ವಯಕಾರ ಪ್ರಭಾಕರ್‌ ಅವರು ಇಲ್ಲಿಂದ ಬಳ್ಳಾರಿಗೆ ತೆರಳಬೇಕಿತ್ತು. ಮೂವರೂ ಹೆಲಿಕಾಪ್ಟರ್‌ ಒಳಗೆ ಕುಳಿತಿದ್ರು, ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ತಾಂತ್ರಿಕ ದೋಷ ಕಂಡು ಬಂತು. ನಂತರ, ಕೆಳಗಿಳಿದು ಮತ್ತೆ ತಾವು ತಂಗಿದ್ದ ಹೋಟೆಲ್‌ಗೆ ವಾಪಸ್ಸಾಗಿ ಮಧ್ಯಾಹ್ನ ಬೇರೆ ಹೆಲಿಕಾಪ್ಟರ್‌ನಲ್ಲಿ ಬಳ್ಳಾರಿಗೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next